ದಕ್ಷಿಣ ಕನ್ನಡ

ಬೆಳ್ತಂಗಡಿ: ದಿಡುಪೆ ಜಲಪಾತ ವೀಕ್ಷಣೆಗೆ ಬಂದಿದ್ದ ಜೋಡಿಗೆ ಬೆದರಿಕೆ; ಐವರ ವಿರುದ್ಧ FIR ದಾಖಲು



ಬೆಳ್ತಂಗಡಿ:
ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ದಿಡುಪೆ ಜಲಪಾತದ ಬಳಿ ಯುವಕ-ಯುವತಿಯನ್ನು ಅಡ್ಡಗಟ್ಟಿ ನೈತಿಕ ಪೊಲೀಸ್‌ಗಿರಿ ನಡೆಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಐವರು ಸ್ಥಳೀಯರು ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.

​ದಿಡುಪೆ ನಿವಾಸಿಗಳಾದ ರಂಜಿತ್, ಸುದರ್ಶನ್, ಸ್ವಸ್ತಿಕ್, ಪ್ರದೀಪ್ ಮತ್ತು ದೀಕ್ಷಿತ್ ಎಂಬುವವರೇ ಪೊಲೀಸರಿಂದ ಎಫ್‌ಐಆರ್ ಎದುರಿಸುತ್ತಿರುವ ಆರೋಪಿಗಳು. ಇವರೊಂದಿಗೆ ಶಾಮೀಲಾಗಿರುವ ಇತರ ಕೆಲವು ವ್ಯಕ್ತಿಗಳ ಮೇಲೂ ಪೊಲೀಸರು ಕೇಸ್ ಜಡಿದಿದ್ದಾರೆ.

​ಘಟನೆಯ ಹಿನ್ನೆಲೆ:

​ಮಂಗಳೂರಿನಿಂದ ಯುವತಿಯೊಬ್ಬಳು ತನ್ನ ಸ್ನೇಹಿತನೊಂದಿಗೆ ಜುಲೈ 12ರಂದು ದಿಡುಪೆ ಜಲಪಾತ ವೀಕ್ಷಣೆಗೆ ಆಗಮಿಸಿದ್ದರು. ನಿಯಮಾವಳಿಗಳ ಪ್ರಕಾರ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ನಲ್ಲಿ ಅನುಮತಿ ಪಡೆದುಕೊಂಡೇ ಇಬ್ಬರೂ ಜಲಪಾತಕ್ಕೆ ತೆರಳಿದ್ದರು ಎನ್ನಲಾಗಿದೆ. ಆದರೆ, ಅವರು ಜಲಪಾತ ವೀಕ್ಷಿಸಿ ರಸ್ತೆಯಲ್ಲಿ ವಾಪಸ್ ಬರುತ್ತಿದ್ದಾಗ ಸ್ಥಳೀಯ ಯುವಕರ ತಂಡವೊಂದು ಇವರನ್ನು ಅಡ್ಡಗಟ್ಟಿದೆ.

​ಯುವಕ ಮತ್ತು ಯುವತಿಯನ್ನು ತಡೆದು ನಿಲ್ಲಿಸಿದ ಈ ತಂಡ, ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಲ್ಲದೆ, ಪ್ರಾಣಬೆದರಿಕೆ ಹಾಕಿದೆ ಎಂದು ಸಂತ್ರಸ್ತ ಯುವತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.


​ಕಾನೂನು ಕ್ರಮ:

​ನೊಂದ ಯುವತಿ ತಡಮಾಡದೆ ಬೆಳ್ತಂಗಡಿ ಪೊಲೀಸ್ ಠಾಣೆಯ ಮೆಟ್ಟಿಲೇರಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಯುವತಿಯ ದೂರನ್ನು ಆಧರಿಸಿ ಸದ್ಯ ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 126(2), 352 ಹಾಗೂ 351(2) ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.



image