ಗಾಂಧಿನಗರ:ಸ್ನಾನ ಮಾಡುವಾಗ ರಹಸ್ಯವಾಗಿ ವಿಡಿಯೋ ಚಿತ್ರೀಕರಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ವಿವಾಹಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ದಂಪತಿ ಸೇರಿ ಕೊಲೆ ಮಾಡಿರುವ ಘಟನೆ ಗುಜರಾತ್‌ನ ಗಾಂಧಿನಗರ ಜಿಲ್ಲೆಯ ಕಲೋಲ್ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಹತ್ಯೆಗೀಡಾದ ಯುವಕನನ್ನು ಹಾರ್ದಿಕ್ ಎಂದು ಗುರುತಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಿಡಿಯೋ ತೋರಿಸಿ ನಿರಂತರ ಲೈಂಗಿಕ ಶೋಷಣೆ
ಪೊಲೀಸ್ ಮೂಲಗಳ ಪ್ರಕಾರ, ಮೃತ ಹಾರ್ದಿಕ್ ಆರೋಪಿ ದಂಪತಿಯ ಮನೆಯ ಸಮೀಪದಲ್ಲೇ ವಾಸವಾಗಿದ್ದ. ಸುಮಾರು ಎರಡು ತಿಂಗಳ ಹಿಂದೆ ನೆರೆಮನೆಯ ಮಹಿಳೆ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಈತ ರಹಸ್ಯವಾಗಿ ವಿಡಿಯೋ ಮಾಡಿದ್ದ ಎನ್ನಲಾಗಿದೆ. ಆ ಬಳಿಕ ಆ ವಿಡಿಯೋವನ್ನು ಪತಿಗೆ ಹಾಗೂ ಸಮಾಜಕ್ಕೆ ತೋರಿಸುವುದಾಗಿ ಹೆದರಿಸಿ, ಮಹಿಳೆಗೆ ಇಷ್ಟವಿಲ್ಲದಿದ್ದರೂ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ಸಮಾಜದಲ್ಲಿ ಮಾನಹಾನಿಯಾಗುವ ಭಯದಿಂದ ಮೂರು ಮಕ್ಕಳ ತಾಯಿಯಾಗಿದ್ದ ಆ ಮಹಿಳೆ ಹಾರ್ದಿಕ್‌ನ ನಿರಂತರ ಕಿರುಕುಳ ಹಾಗೂ ಶೋಷಣೆಯನ್ನು ಸಹಿಸಿಕೊಂಡಿದ್ದಳು ಎನ್ನಲಾಗಿದೆ.
ಗಂಡನಿಗೆ ಸಿಕ್ಕಿಬಿದ್ದ ಫೋನ್ ಕಾಲ್: ಬಯಲಾಯ್ತು ರಹಸ್ಯ!
ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯ ಪತಿಗೆ ಇತ್ತೀಚೆಗೆ ಪತ್ನಿಯ ಮೊಬೈಲ್ ನಡವಳಿಕೆ ಮೇಲೆ ಅನುಮಾನ ಬಂದಿತ್ತು. ಹಾರ್ದಿಕ್ ಜೊತೆ ಪತ್ನಿ ಮಾತನಾಡುತ್ತಿದ್ದುದನ್ನು ಗಮನಿಸಿ ಪತಿ ತರಾಟೆಗೆ ತಗೆದುಕೊಂಡಾಗ, ಮಹಿಳೆ ತನಗೆ ಆಗುತ್ತಿದ್ದ ಬ್ಲ್ಯಾಕ್‌ಮೇಲ್ ಹಾಗೂ ಲೈಂಗಿಕ ಕಿರುಕುಳದ ಸಂಪೂರ್ಣ ಸತ್ಯವನ್ನು ಅತ್ತು ಬಿಚ್ಚಿಟ್ಟಿದ್ದಾಳೆ. ಇದರಿಂದ ತೀವ್ರ ಆಕ್ರೋಶಗೊಂಡ ಪತಿ, ಪತ್ನಿಯ ಜೊತೆಗೂಡಿ ಹಾರ್ದಿಕ್‌ನನ್ನು ಮುಗಿಸಲು ಜುಲೈ 11 ರಂದು ಸ್ಕೆಚ್ ಹಾಕಿದ್ದಾನೆ.
ಸಿನಿಮಾ ಶೈಲಿಯಲ್ಲಿ ಕೊಲೆಗೆ ತಂತ್ರ
ಯೋಜನೆಯಂತೆ ಜುಲೈ 11 ರಂದು ದಂಪತಿಯ ಮಕ್ಕಳು ಶಾಲೆಗೆ ಹೋದ ಬಳಿಕ, ಮಹಿಳೆ ಹಾರ್ದಿಕ್‌ಗೆ ಕರೆ ಮಾಡಿ ಮನೆಗೆ ಬರುವಂತೆ ತಿಳಿಸಿದ್ದಾಳೆ. ಈ ವೇಳೆ ಪತಿ ಮನೆಯಿಂದ ಹೊರಗೆ ಹೋದಂತೆ ನಾಟಕವಾಡಿದ್ದಾನೆ. ಮನೆಯೊಳಗೆ ಬಂದ ಹಾರ್ದಿಕ್ ಮಹಿಳೆಯ ಜೊತೆ ಮಾತನಾಡುತ್ತಿದ್ದಂತೆ ಅಡಗಿದ್ದ ಪತಿ ದಿಢೀರ್ ದಾಳಿ ನಡೆಸಿ ಆತನ ಎದೆಯ ಮೇಲೆ ಕುಳಿತಿದ್ದಾನೆ. ಈ ವೇಳೆ ಪತ್ನಿ ಹಾರ್ದಿಕ್‌ನ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಪತಿ ಸ್ಕಾರ್ಫ್‌ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಆ ಬಳಿಕ ಹಾರ್ದಿಕ್ ಸಾವನ್ನಪ್ಪಿರುವುದನ್ನು ಖಚಿತಪಡಿಸಿಕೊಳ್ಳಲು ಫ್ಯಾನ್ ವೈರಿಂಗ್ ಕೇಬಲ್‌ನಿಂದ ಮತ್ತೊಮ್ಮೆ ಕುತ್ತಿಗೆಯನ್ನು ಬಿಗಿದಿದ್ದಾರೆ.
ಪ್ಲಾಸ್ಟಿಕ್ ಚೀಲದಲ್ಲಿ ಶವ; ತಪ್ಪಿಸಿಕೊಳ್ಳುವ ಮುನ್ನವೇ ಪೊಲೀಸ್ ಬಲೆಗೆ!
ಹತ್ಯೆಯ ನಂತರ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಟ್ಟು, ಮನೆಗೆ ಬೀಗ ಹಾಕಿ ದಂಪತಿ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಹೋಗಿ ಮಹಿಳೆಯ ತಂದೆಯ ಮನೆಯಲ್ಲಿ ಬಿಟ್ಟು, ಬೇರೆ ನಗರಕ್ಕೆ ಓಡಿಹೋಗಲು ಸಿದ್ಧತೆ ನಡೆಸುತ್ತಿದ್ದರು. ಈ ಮಧ್ಯೆ ಹಾರ್ದಿಕ್ ನಾಪತ್ತೆಯಾಗಿರುವ ಬಗ್ಗೆ ಆತನ ತಂದೆ ರಮೇಶ್‌ಜಿ ಠಾಕೋರ್ ಕಲೋಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನ ಅನ್ವಯ ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೊಬೈಲ್ ಲೊಕೇಶನ್ ಹಾಗೂ ದಂಪತಿಯ ಚಲನವಲನದ ಆಧಾರದ ಮೇಲೆ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಭೀಕರ ಕೊಲೆಯ ರಹಸ್ಯ ಬಯಲಾಗಿದೆ. ಕೊಲೆಯ ಬಳಿಕ ಸಾಕ್ಷ್ಯ ನಾಶಪಡಿಸಲು ಹಾರ್ದಿಕ್‌ನ ಮೊಬೈಲ್ ಫೋನನ್ನು ಆರೋಪಿಗಳು ಒಡೆದು ರಸ್ತೆ ಬದಿಗೆ ಎಸೆದಿದ್ದರು. ಸದ್ಯ ಕಲೋಲ್ ತಾಲೂಕು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ದಂಪತಿಯನ್ನು ಜೈಲಿಗಟ್ಟಿದ್ದಾರೆ.