
ಜೈಪುರ: ಸರ್ಕಾರಿ ಉದ್ಯೋಗ ಮತ್ತು ಕೋಟ್ಯಂತರ ರೂಪಾಯಿ ಮೌಲ್ಯದ ಕೌಟುಂಬಿಕ ಆಸ್ತಿಯನ್ನು ತನ್ನದಾಗಿಸಿಕೊಳ್ಳಲು ಹೆತ್ತ ಮಗಳೇ ಸುಪಾರಿ ನೀಡಿ ತಾಯಿಯನ್ನು ಭೀಕರವಾಗಿ ಹತ್ಯೆ ಮಾಡಿಸಿರುವ ಆಘಾತಕಾರಿ ಘಟನೆ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಬೆಳಕಿಗೆ ಬಂದಿದೆ.
ಆಯುಷಿ ಶರ್ಮಾ ಎಂಬಾಕೆಯೇ ಹೆತ್ತ ಕರುಳನ್ನೇ ಕತ್ತರಿಸಿದ ಪಾಪಿ ಮಗಳು. ಈಕೆ ತನ್ನ ತಾಯಿಯನ್ನು ಮುಗಿಸಲು ಸ್ವಂತ ಚಿಕ್ಕಪ್ಪ ಮತ್ತು ಸಂಬಂಧಿಕರ ಜೊತೆ ಕೈಜೋಡಿಸಿ ಬರೋಬ್ಬರಿ 7 ಲಕ್ಷ ರೂಪಾಯಿ ಸುಪಾರಿ ನೀಡಿದ್ದಾಳೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಹತ್ಯೆಯ ಹಿಂದಿನ ಅಸಲಿ ಸ್ಕೆಚ್ ಇಲ್ಲಿದೆ:
ಮೃತ ಮಹಿಳೆಯ ಪತಿ ಈ ಹಿಂದೆ ನ್ಯಾಯಾಲಯದಲ್ಲಿ ಎಲ್‌ಡಿಸಿ (ಲೋಯರ್ ಡಿವಿಷನ್ ಕ್ಲರ್ಕ್) ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ನಿಧನದ ನಂತರ ಅನುಕಂಪದ ಆಧಾರದ ಮೇಲೆ ಅವರ ಪತ್ನಿಗೆ (ಆಯುಷಿಯ ತಾಯಿ) ಆ ಸರ್ಕಾರಿ ಉದ್ಯೋಗ ಸಿಕ್ಕಿತ್ತು. ಆದರೆ, ಈ ಕೆಲಸ ತನಗೆ ಸಿಗಬೇಕು ಮತ್ತು ತಂದೆಯ ಆಸ್ತಿಯ ಸಂಪೂರ್ಣ ಹಕ್ಕು ತನ್ನದಾಗಬೇಕು ಎಂಬ ದುರಾಸೆ ಮಗಳು ಆಯುಷಿಗೆ ಹುಟ್ಟಿಕೊಂಡಿತ್ತು.
ಅಪಘಾತದ ನಾಟಕವಾಡಿದ ಆರೋಪಿಗಳು:
ತಾಯಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಆಯುಷಿ, ತನ್ನ ಚಿಕ್ಕಪ್ಪ ಹಾಗೂ ಮತ್ತೊಬ್ಬ ಸಂಬಂಧಿಯ ಸಹಾಯ ಪಡೆದಿದ್ದಾಳೆ. 7 ಲಕ್ಷ ರೂಪಾಯಿ ಡೀಲ್ ಕುದುರಿಸಿ, ತಾಯಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸ್ಕಾರ್ಪಿಯೋ ವಾಹನದಿಂದ ಜೋರಾಗಿ ಡಿಕ್ಕಿ ಹೊಡೆಸಿದ್ದಾಳೆ. ಮೊದಲಿಗೆ ಇದು ಕೇವಲ ರಸ್ತೆ ಅಪಘಾತ ಎನ್ನಲಾಗಿತ್ತಾದರೂ, ಪೊಲೀಸರು ತೀವ್ರ ತನಿಖೆ ನಡೆಸಿದಾಗ ಮಗಳ ಕ್ರೂರ ಮುಖವಾಡ ಕಳಚಿ ಬಿದ್ದಿದೆ. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.