
ಗಂಗಾವತಿ: ಆರ್ಥಿಕ ಸಂಕಷ್ಟ ಹಾಗೂ ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧೃತಿಗೆಡಿಸುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದಿದೆ.ಪ್ರಕಾಶ್ ರಾಯ್ಕರ್ (54), ಅವರ ಪತ್ನಿ ಪ್ರಭಾ (46) ಹಾಗೂ ಪುತ್ರ ಶಶಾಂಕ್ (21) ಮೃತಪಟ್ಟ ದುರ್ದೈವಿಗಳು.
ಮೃತ ಪ್ರಕಾಶ್ ರಾಯ್ಕರ್ ಅವರು ಗಂಗಾವತಿಯಲ್ಲಿ ಚಿನ್ನದ ಅಂಗಡಿ ನಡೆಸುತ್ತಿದ್ದರು ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ತೀವ್ರ ಆರ್ಥಿಕ ನಷ್ಟ ಅನುಭವಿಸಿದ್ದ ಕುಟುಂಬವು ಸಾಲದ ಸುಳಿಗೆ ಸಿಲುಕಿತ್ತು. ಪ್ರಾಥಮಿಕ ತನಿಖೆಯ ಪ್ರಕಾರ, ಸಾಲಗಾರರ ಕಾಟ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ಬೇಸತ್ತು ಇಡೀ ಕುಟುಂಬವೇ ಈ ಭೀಕರ ನಿರ್ಧಾರಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ. ಸಾಲಬಾಧೆ ತೀರಿಸಲಾಗದೆ ಮನೆಯಲ್ಲಿ ಮೂವರೂ ನೇಣಿಗೆ ಶರಣಾಗಿದ್ದಾರೆ.
ಪೊಲೀಸ್ ಭೇಟಿ ಮತ್ತು ತನಿಖೆ:
ವಿಷಯ ತಿಳಿಯುತ್ತಿದ್ದಂತೆ ಗಂಗಾವತಿ ನಗರ ಠಾಣೆಯ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
