ದಕ್ಷಿಣ ಕನ್ನಡ

Mangalore: ಡೊಂಗರಕೇರಿ ಸುತ್ತಮುತ್ತ ಕಾಮಾಲೆ ರೋಗದ ಭೀತಿ; 19 ಜನರಲ್ಲಿ ಹೆಪಟೈಟಿಸ್ ಪತ್ತೆ!


​ಮಂಗಳೂರು:ಕರಾವಳಿ ನಗರಿ ಮಂಗಳೂರಿನ ಡೊಂಗರಕೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಮಾಲೆ (ಹೆಪಟೈಟಿಸ್) ರೋಗದ ಭೀತಿ ಕಾಣಿಸಿಕೊಂಡಿದೆ. ಸುಮಾರು ಒಂದೂವರೆ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹೆಪಟೈಟಿಸ್ ‘ಎ’ ಮತ್ತು ಹೆಪಟೈಟಿಸ್ ‘ಇ’ ಪ್ರಕರಣಗಳು ಬೆಳಕಿಗೆ ಬಂದಿದ್ದು, ಕಳೆದ 15 ದಿನಗಳಲ್ಲಿ ಒಟ್ಟು 19 ಜನರಲ್ಲಿ ಸೋಂಕು ದೃಢಪಟ್ಟಿದೆ.

​ಆರೋಗ್ಯ ಇಲಾಖೆಯಿಂದ ತೀವ್ರ ನಿಗಾ, ಸರ್ವೇಕ್ಷಣೆ

​ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (DHO) ಡಾ. ಎಚ್‌.ಆರ್‌. ತಿಮ್ಮಯ್ಯ ಅವರು, "ಡೊಂಗರಕೇರಿ, ಅಳಕೆ ಹಾಗೂ ಕುದ್ರೋಳಿ ಭಾಗದಲ್ಲಿ ಕಾಮಾಲೆ ಪ್ರಕರಣಗಳು ವರದಿಯಾಗಿವೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಈ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದು, ನಿರಂತರವಾಗಿ ಆರೋಗ್ಯ ಸರ್ವೇಕ್ಷಣೆ ನಡೆಸುತ್ತಿದ್ದಾರೆ" ಎಂದು ತಿಳಿಸಿದರು.

ನೀರಿನ ಮಾದರಿಗಳ ಪರೀಕ್ಷೆ

ಸೋಂಕು ಹರಡಲು ಕಲುಷಿತ ನೀರು ಕಾರಣವಿರಬಹುದು ಎಂಬ ಶಂಕೆಯ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆಯು ಈ ಭಾಗದ ವಿವಿಧ 40 ಕಡೆಗಳಿಂದ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಿದೆ. "ಈಗಾಗಲೇ ಬಂದಿರುವ ವರದಿಗಳಲ್ಲಿ ಒಂದು ನೀರಿನ ಮಾದರಿಯಲ್ಲಿ ರೋಗಾಣು ಪತ್ತೆಯಾಗಿದ್ದು, ಇನ್ನು 13 ಮಾದರಿಗಳ ಫಲಿತಾಂಶ ಬರಬೇಕಾಗಿದೆ" ಎಂದು ಡಾ. ತಿಮ್ಮಯ್ಯ ವಿವರಿಸಿದರು.

​ಡೆಂಗ್ಯೂ ಬಗ್ಗೆಯೂ ಇರಲಿ ಎಚ್ಚರ: ಡಾ. ನವೀನ್ ಚಂದ್ರ ಕುಲಾಲ್

​ಇದೇ ವೇಳೆ ಮಾತನಾಡಿದ ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ. ನವೀನ್‍ ಚಂದ್ರ ಕುಲಾಲ್ ಅವರು, "ನಗರದಲ್ಲಿ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿರುವುದರಿಂದ ಹಲವೆಡೆ ನೀರು ನಿಲ್ಲುವ ಸಾಧ್ಯತೆ ಹೆಚ್ಚಿದೆ. ಇದು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿ ಡೆಂಗ್ಯೂ ಜ್ವರ ಹರಡಬಹುದು. ಆದ್ದರಿಂದ ಸಾರ್ವಜನಿಕರು ತಮ್ಮ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು" ಎಂದು ಕರೆ ನೀಡಿದರು.



image