
ಮಂಗಳೂರು (ಜುಲೈ 01):ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ತೊಕ್ಕೊಟ್ಟು ಬಳಿ ಭಾರಿ ಆತಂಕ ಮೂಡಿಸುವ ಘಟನೆಯೊಂದು ನಡೆದಿದೆ. ಇಲ್ಲಿನ ಕೆರೆಬೈಲ್‌ನಲ್ಲಿ ತಡರಾತ್ರಿ ಖಾಸಗಿ ಎಸ್ಟೇಟ್‌ಗೆ ಸೇರಿದ ಬೃಹತ್ ಕಾಂಪೌಂಡ್ ಗೋಡೆಯೊಂದು ಪಕ್ಕದ ಮನೆಯ ಮೇಲೆಯೇ ಕುಸಿದು ಬಿದ್ದಿದೆ. ಈ ಭೀಕರ ಘಟನೆಗೆ ಇಡೀ ಮನೆ ಸಂಪೂರ್ಣವಾಗಿ ನೆಲಸಮವಾಗಿದ್ದರೂ, ಅದೃಷ್ಟವಶಾತ್ ಐದು ಜೀವಗಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿವೆ.
ಅಷ್ಟಕ್ಕೂ ಆಗಿದ್ದೇನು? ಕೆರೆಬೈಲ್ ಗುಡ್ಡೆ ನಿವಾಸಿ ಕಿಶೋರ್ ಎಂಬುವವರ ಮನೆ ಪಕ್ಕದಲ್ಲೇ ಡೆಲ್ಟಾ ಇನ್ಫ್ರಾಲಾಜಿಸ್ಟಿಕ್ಸ್ ವರ್ಲ್ಡ್‌ವೈಡ್ ಲಿಮಿಟೆಡ್‌ನ ಮಾಲೀಕರಾದ ಅಹ್ಮದ್ ಮೊಯ್ದೀನ್ ಅವರಿಗೆ ಸೇರಿದ ಐಷಾರಾಮಿ ಎಸ್ಟೇಟ್ ಇದೆ. ಬೆಟ್ಟದ ತುದಿಯಲ್ಲಿರುವ ಈ ಎಸ್ಟೇಟ್ ಸುತ್ತಲೂ ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಎತ್ತರದ ಕಾಂಪೌಂಡ್ ಗೋಡೆಯನ್ನು ನಿರ್ಮಿಸಲಾಗಿತ್ತು.ಆದರೆ, ಕಳೆದ ವರ್ಷ ಸುರಿದ ಮುಂಗಾರು ಮಳೆಗೆ ಈ ಗೋಡೆಯ ಒಂದು ಭಾಗ ದುರ್ಬಲಗೊಂಡು, ಕಿಶೋರ್ ಅವರ ಮನೆಯ ಕಡೆಗೆ ವಾಲಿತ್ತು. ಈ ಬಗ್ಗೆ ಕಿಶೋರ್ ಅವರು ಉಳ್ಳಾಲ ನಗರ ಪುರಸಭೆಯ ಅಧಿಕಾರಿಗಳ ಗಮನಕ್ಕೆ ತಂದು ದೂರು ನೀಡಿದ್ದರು.
ಅಧಿಕಾರಿಗಳ ಮುನ್ನೆಚ್ಚರಿಕೆ: ತಪ್ಪಿದ ಮಹಾ ದುರಂತ!ಅಪಾಯದ ಮುನ್ಸೂಚನೆ ಅರಿತಿದ್ದ ಪುರಸಭೆ ಅಧಿಕಾರಿಗಳು, ಮುನ್ನೆಚ್ಚರಿಕೆ ಕ್ರಮವಾಗಿ ಎರಡು ವಾರಗಳ ಹಿಂದಷ್ಟೇ ಕಿಶೋರ್ ಅವರ ಕುಟುಂಬ ಸೇರಿದಂತೆ ಸುತ್ತಮುತ್ತಲಿನ ಸುಮಾರು ಹತ್ತು ಮನೆಗಳ ನಿವಾಸಿಗಳನ್ನು ಸುರಕ್ಷಿತ ಬಾಡಿಗೆ ಮನೆಗಳಿಗೆ ಸ್ಥಳಾಂತರಿಸಿದ್ದರು. ಕಿಶೋರ್ ಅವರ ಕುಟುಂಬ ಸಂಬಂಧಿಕರ ಮನೆಗೆ ತೆರಳಿತ್ತು. ಮಂಗಳವಾರ ರಾತ್ರಿ ಕರಾವಳಿಯುದ್ದಕ್ಕೂ ಸುರಿದ ಭಾರಿ ಮಳೆಗೆ ಕೊನೆಗೂ ಆ ಬೃಹತ್ ಕಾಂಪೌಂಡ್ ಗೋಡೆ ಕಿಶೋರ್ ಅವರ ಮನೆಯ ಮೇಲೆಯೇ ಉರುಳಿ ಬಿದ್ದಿದೆ. ಪರಿಣಾಮ ಮನೆ ಸಂಪೂರ್ಣ ಜಖಂಗೊಂಡಿದೆ. ಒಂದು ವೇಳೆ ಕುಟುಂಬಸ್ಥರು ಅಲ್ಲೇ ವಾಸವಿದ್ದಿದ್ದರೆ ದೊಡ್ಡ ಜೀವಹಾನಿಯಾಗುವ ಸಾಧ್ಯತೆಯಿತ್ತು.
ಸ್ಥಳೀಯರ ಆಕ್ರೋಶ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತರಾಟೆ ಘಟನೆ ಬೆನ್ನಲ್ಲೇ ಸ್ಥಳೀಯ ನಿವಾಸಿಗಳು ಉಳ್ಳಾಲ ನಗರ ಪುರಸಭೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಪೌಂಡ್ ಗೋಡೆ ಅಪಾಯಕಾರಿಯಾಗಿದೆ ಎಂದು ಮೊದಲೇ ದೂರು ನೀಡಿದ್ದರೂ, ಎಸ್ಟೇಟ್ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸದ್ಯಕ್ಕೆ ನಿವಾಸಿಗಳನ್ನು ಸ್ಥಳಾಂತರಿಸಿ ಜೀವ ಉಳಿಸಿರುವುದು ಸಮಾಧಾನ ತಂದಿದ್ದರೂ, ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ಸಿಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
