ದಕ್ಷಿಣ ಕನ್ನಡ

Mangalore: ಗುಡ್ಡ ಕುಸಿತ ದುರಂತ: ಸ್ಥಳಕ್ಕೆ ಸಚಿವ ಯು.ಟಿ. ಖಾದರ್ ಭೇಟಿ; ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಣೆ!

ಮಂಗಳೂರು: ನಗರದ ಕಂಕನಾಡಿ ನಾಗುರಿಯಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಬೆನ್ನಲ್ಲೇ, ಘಟನಾ ಸ್ಥಳಕ್ಕೆ ಶಾಸಕ ಯು.ಟಿ. ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುರಂತದ ತೀವ್ರತೆಯನ್ನು ಅವಲೋಕಿಸಿದ ಅವರು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಪ್ರಕಟಿಸಿದರು.
ಸಿಎಂ ಜೊತೆ ಚರ್ಚೆ; ಇದು ಕರಾವಳಿಗೆ ಎಚ್ಚರಿಕೆಯ ಗಂಟೆ!
"ಪ್ರಕೃತಿ ವಿಕೋಪಗಳು ಯಾವಾಗ, ಹೇಗೆ ಸಂಭವಿಸುತ್ತವೆ ಎಂದು ಊಹಿಸಲು ಸಾಧ್ಯವಿಲ್ಲ. ರಾತ್ರೋರಾತ್ರಿ ದುರಂತ ಸಂಭವಿಸಿದ ತಕ್ಷಣವೇ ಸ್ಥಳೀಯರು ಹಾಗೂ ಪೊಲೀಸ್ ಸಿಬ್ಬಂದಿ ಜಂಟಿಯಾಗಿ ಅತ್ಯಂತ ವೇಗವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಅವರ ಈ ಸಮಯಪ್ರಜ್ಞೆಗೆ ಧನ್ಯವಾದಗಳು. ಘಟನೆಯಲ್ಲಿ ಗಾಯಗೊಂಡು ಬದುಕುಳಿದವರಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಕಲ್ಪಿಸಲಾಗುವುದು" ಎಂದು ಭರವಸೆ ನೀಡಿದರು.
"ಈ ದುರಂತದ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಂದಾಯ ಸಚಿವರ ಜೊತೆ ಈಗಾಗಲೇ ಸುದೀರ್ಘವಾಗಿ ಚರ್ಚಿಸಿದ್ದೇನೆ. ಸದ್ಯ ಮಳೆಗಾಲ ಆರಂಭವಾಗಿದೆಯಷ್ಟೆ, ಅಷ್ಟರಲ್ಲೇ ಇಷ್ಟೊಂದು ದೊಡ್ಡ ದುರಂತ ನಡೆದಿರುವುದು ನಮ್ಮೆಲ್ಲರಿಗೂ ಎಚ್ಚರಿಕೆಯ ಕರೆಗಂಟೆಯಾಗಿದೆ. ಮಂಗಳೂರು ಪ್ರಕೃತಿ ಸಹಜವಾಗಿ ಎತ್ತರ-ತಗ್ಗುಗಳಿಂದ ಕೂಡಿದ ಪ್ರದೇಶವಾಗಿದೆ. ಹೀಗಾಗಿ ಅಧಿಕಾರಿಗಳು ತಕ್ಷಣವೇ ಅಪಾಯಕಾರಿ ಜಾಗಗಳಿಗೆ ಭೇಟಿ ನೀಡಿ ಜನರಿಗೆ ಮುನ್ನೆಚ್ಚರಿಕೆ ನೀಡಲಿದ್ದಾರೆ. ಆದರೆ, ಸಾರ್ವಜನಿಕರೂ ಸಹ ಸ್ವಯಂ ಪ್ರೇರಿತರಾಗಿ ಜಾಗರೂಕರಾಗಿರಬೇಕು" ಎಂದು ಯು.ಟಿ. ಖಾದರ್ ಮನವಿ ಮಾಡಿದರು.


ಖಾಸಗಿ ಜಾಗದ ದುರಂತ: ಮಾಲೀಕರೇ ಹೊಣೆ, ಪರಿಹಾರದ ನಿಯಮ ಸ್ಪಷ್ಟನೆ
ಪರಿಹಾರ ವಿತರಣೆಯ ಕಾನೂನು ನಿಯಮಗಳ ಬಗ್ಗೆ ಮಾತನಾಡಿದ ಅವರು, "ಸರ್ಕಾರಿ ಜಾಗದಲ್ಲಿ ಅಪಾಯಕಾರಿ ಪರಿಸ್ಥಿತಿ ಇದ್ದರೆ ಸರ್ಕಾರವೇ ಸರಿಪಡಿಸುತ್ತದೆ. ಆದರೆ, ಖಾಸಗಿ ಜಾಗದಲ್ಲಿ ಕಾಂಪೌಂಡ್ ಅಥವಾ ಗೋಡೆ ಕುಸಿದಾಗ ಸರ್ಕಾರ ನೇರವಾಗಿ ಹಸ್ತಕ್ಷೇಪ ಮಾಡಲು ಮಿತಿಗಳಿವೆ. ಇಲ್ಲಿ ಬಾಡಿಗೆದಾರರು ಅಥವಾ ಕಾರ್ಮಿಕರು ಸಂತ್ರಸ್ತರಾಗಿದ್ದರೆ, ನೇರವಾಗಿ ಅವರಿಗೆ ಪರಿಹಾರ ನೀಡಲು ನಿಯಮಾವಳಿಗಳಲ್ಲಿ ಅವಕಾಶವಿರುವುದಿಲ್ಲ. ಬದಲಿಗೆ ಮನೆ ಮಾಲೀಕರಿಗೆ ಪರಿಹಾರ ನೀಡಲಾಗುತ್ತದೆ, ಆ ಹಣದಿಂದ ಅವರು ತಕ್ಷಣ ಮನೆ ದುರಸ್ತಿ ಮಾಡಿಕೊಡಬೇಕಾಗುತ್ತದೆ" ಎಂದರು.
ಖಾಸಗಿ ಕಟ್ಟಡಗಳ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ ಅವರು, "ಖಾಸಗಿಯವರು ನಿರ್ಮಿಸಿದ ಕಟ್ಟಡ ಅಥವಾ ಕಾಮಗಾರಿಗಳಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಅದಕ್ಕೆ ಅವರೇ ನೇರ ಹೊಣೆಗಾರರಾಗುತ್ತಾರೆ. ಸದ್ಯದಲ್ಲೇ ತೊಕ್ಕೊಟ್ಟಿನ ತಡೆಗೋಡೆ ಕುಸಿದ ಪ್ರದೇಶಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದೇನೆ" ಎಂದು ತಿಳಿಸಿದರು.



image