ಮಂಗಳೂರು:ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಯುವತಿ ಲಾವಣ್ಯ ಗೌಡ ಅವರನ್ನ ನಡುರಸ್ತೆಯಲ್ಲೇ ಭೀಕರವಾಗಿ ಹತ್ಯೆಗೈದಿದ್ದ ಆರೋಪಿ ಚೇತನ್, ಸದ್ಯ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ವಿಷ ಸೇವಿಸಿದ್ದ ಆರೋಪಿ:
ಕೃತ್ಯ ಎಸಗಿದ ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದ ಬೆಳ್ತಂಗಡಿಯ ಓಡಿಲ್ನಾಳ ನಿವಾಸಿ ಚೇತನ್, ಪೊಲೀಸರ ಕೈಗೆ ಸಿಕ್ಕಿಬೀಳುವ ಭೀತಿಯಿಂದ ಇಲಿ ಪಾಷಾಣ ಕುಡಿದಿದ್ದ. ತನಿಖೆ ವೇಳೆ ಆರೋಪಿಯೇ ಈ ವಿಷಯ ಬಾಯ್ಬಿಟ್ಟಿದ್ದು, ತಕ್ಷಣವೇ ಆತನನ್ನು ಪೊಲೀಸರು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ಆದರೆ, ಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
5 ದಿನ ವೈದ್ಯಕೀಯ ನಿಗಾ:
ಆರೋಪಿಯ ದೇಹಕ್ಕೆ ವಿಷ ಹರಡಿರುವುದರಿಂದ ಕನಿಷ್ಠ 5 ದಿನಗಳ ಕಾಲ ಆತನನ್ನು ವೈದ್ಯಕೀಯ ತಪಾಸಣೆಯಲ್ಲಿಡಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆತನನ್ನು ಐಸಿಯುನಲ್ಲೇ ಇರಿಸಿ ನಿರಂತರ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.
ಚೇತರಿಸಿಕೊಂಡ ತಕ್ಷಣ ಕೋರ್ಟ್‌ಗೆ ಹಾಜರು:
ಆರೋಪಿಯ ಆರೋಗ್ಯ ಪರಿಸ್ಥಿತಿ ಚೇತರಿಸಿಕೊಂಡು, ವಿಚಾರಣೆಗೆ ಸಹಕರಿಸಲು ಆತ ಅರ್ಹನಾಗಿದ್ದಾನೆ ಎಂದು ವೈದ್ಯರು ಸ್ಪಷ್ಟಪಡಿಸಿದ ಬಳಿಕವೇ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಯಾವುದೇ ರೀತಿಯ ಅಪ್ರಿಯ ಘಟನೆ ನಡೆಯದಂತೆ ಹಾಗೂ ಆರೋಪಿ ಪರಾರಿಯಾಗದಂತೆ ಆಸ್ಪತ್ರೆಯ ಸುತ್ತಲೂ ಬಿಗಿ ಪೊಲೀಸ್ ಕಾವಲು ಹಾಕಲಾಗಿದೆ.
