ಮಂಗಳೂರು:ಕರಾವಳಿ ಪೊಲೀಸ್ ಇತಿಹಾಸದಲ್ಲೇ ಮಂಗಳೂರು ನಗರ ಸಿಸಿಬಿ (CCB) ಪೊಲೀಸರು ಅತ್ಯಂತ ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ದೆಹಲಿಯಿಂದ ಬೆಂಗಳೂರು ಮಾರ್ಗವಾಗಿ ಸಾಗಿಸಲಾಗುತ್ತಿದ್ದ ಬರೋಬ್ಬರಿ 5.20 ಕೋಟಿ ರೂಪಾಯಿ ಮೌಲ್ಯದ ಎಂಡಿಎಂಎ (MDMA) ಮಾದಕ ದ್ರವ್ಯವನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅಂತಾರಾಜ್ಯ ಡ್ರಗ್ ಜಾಲದ ಪ್ರಮುಖ ಕಿಂಗ್‌ಪಿನ್‌ಗಳಾದ ಬೆಳ್ತಂಗಡಿ ಮೂಲದ ಇಬ್ಬರು ಪೆಡ್ಲರ್‌ಗಳನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಸಿಸಿಬಿ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.
ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಅಮೀಷಾ ಮಂಜಿಲ್ ನಿವಾಸಿ ಮೊಹಮ್ಮದ್ ಅಲ್ಫಾಜ್ (28) ಹಾಗೂ ಉಜಿರೆ ಲಾಯಿಲಾ ಗ್ರಾಮದ ವಿವೇಕಾನಂದ ನಗರದ ಮೊಹಮ್ಮದ್ ಮುಸ್ತಾಫಾ (28) ಬಂಧಿತ ಆರೋಪಿಗಳು.
ದಕ್ಷಿಣ ಕನ್ನಡ ಇತಿಹಾಸದಲ್ಲೇ ಅತಿದೊಡ್ಡ ಬೇಟೆ!
ಈ ಮೆಗಾ ಕಾರ್ಯಾಚರಣೆಯ ಕುರಿತು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿಗಳಿಂದ ಒಟ್ಟು 5 ಕೆಜಿ 196 ಗ್ರಾಂ ತೂಕದ ಎಂಡಿಎಂಎ (MDMA) ಮಾದಕವಸ್ತು, ಸಾಗಾಟಕ್ಕೆ ಬಳಸಿದ್ದ ಬ್ಯಾಗ್ ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ ಸುಮಾರು 5 ಕೋಟಿ 20 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಸುರತ್ಕಲ್ ಕೇಸ್‌ನಿಂದ ಬಯಲಾಯ್ತು ಅಂತಾರಾಜ್ಯ ಜಾಲ
ಜೂನ್ 25 ರಂದು ಮಂಗಳೂರಿನ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿಗುಡ್ಡೆಯಲ್ಲಿ ಸಿಸಿಬಿ ಪೊಲೀಸರು ನಡೆಸಿದ್ದ ದಾಳಿಯೇ ಈ ಇಡೀ ಜಾಲ ಪತ್ತೆಯಾಗಲು ಮೂಲ ಕಾರಣ. ಅಂದು ಪೊಲೀಸರು ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು ಎಂಬಾತನನ್ನು ಬಂಧಿಸಿ, 15.17 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದರು.
ಈ ಕೇಸ್ ಬೆನ್ನತ್ತಿದ ಸಿಸಿಬಿ ಅಧಿಕಾರಿಗಳ ತಂಡಕ್ಕೆ ಅಂತಾರಾಜ್ಯ ಮಟ್ಟದ ದೊಡ್ಡ ಜಾಲವೊಂದು ಕಾರ್ಯಾಚರಿಸುತ್ತಿರುವ ಸುಳಿವು ಸಿಕ್ಕಿತ್ತು. ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರು, ಜುಲೈ 15ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ 'ರಾಯಲ್ ಇನ್ ಲಾಡ್ಜ್' ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ದೆಹಲಿಯಿಂದ ಕಾರಿನ ಮೂಲಕ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕವಸ್ತುವನ್ನು ಸಾಗಿಸುತ್ತಿದ್ದ ಅಲ್ಫಾಜ್ ಮತ್ತು ಮುಸ್ತಾಫಾನನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಲಾಗಿದೆ.
ಹಳೇ ಆರೋಪಿಗಳು; ಬೆಂಗಳೂರೇ ಇವರ ಮೇನ್ ಸೆಂಟರ್!
ಬಂಧಿತ ಆರೋಪಿಗಳ ಪೈಕಿ ಮೊಹಮ್ಮದ್ ಅಲ್ಫಾಜ್ ಹಳೇ ಗಿರಾಕಿಯಾಗಿದ್ದು, ಈತನ ವಿರುದ್ಧ ಈಗಾಗಲೇ 2024ರಲ್ಲಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಹಾಗೂ 2026ರಲ್ಲಿ ಉರ್ವ ಪೊಲೀಸ್ ಠಾಣೆಯಲ್ಲಿ ಡ್ರಗ್ಸ್ ಮಾರಾಟಕ್ಕೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿವೆ. ಈ ಆರೋಪಿಗಳು ಬೆಂಗಳೂರನ್ನು ತಮ್ಮ ಮುಖ್ಯ ಕೇಂದ್ರವಾಗಿಸಿಕೊಂಡು, ಕರಾವಳಿ ಜಿಲ್ಲೆಗಳು ಹಾಗೂ ನೆರೆಯ ಕೇರಳ ರಾಜ್ಯಕ್ಕೆ ದೊಡ್ಡ ಮಟ್ಟದಲ್ಲಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಡ್ರಗ್ಸ್ ಜಾಲದ ಬೇರು ಸಡಲಿಸಲು ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

