ದಕ್ಷಿಣ ಕನ್ನಡ

Mangalore: ನಾಗುರಿಯಲ್ಲಿ ಘೋರ ಪ್ರಕೃತಿ ವಿಕೋಪ; ಮನೆ ಮೇಲೆ ಕುಸಿದ ಗುಡ್ಡ, ಇಬ್ಬರು ಕಂದಮ್ಮಗಳು ಸೇರಿ ಮೂವರು ದುರ್ಮರಣ!

 
ಮಂಗಳೂರು: ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಮಂಗಳೂರು ನಗರದ ನಾಗುರಿಯಲ್ಲಿ ಇಂದು ಮುಂಜಾನೆ ಕರುಳು ಹಿಂಡುವ ಘಟನೆಯೊಂದು ಸಂಭವಿಸಿದೆ. ಕಂಕನಾಡಿ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ವಾಸದ ಮನೆಯೊಂದರ ಮೇಲೆ ಏಕಾಏಕಿ ಗುಡ್ಡ ಕುಸಿದು ಬಿದ್ದ ಪರಿಣಾಮ, ಇಬ್ಬರು ಅಪ್ರಾಪ್ತ ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ.ಮಣ್ಣಿನ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಒಟ್ಟು ಆರು ಜನರಲ್ಲಿ ಮೂವರನ್ನು ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ಸಕಾಲದಲ್ಲಿ ರಕ್ಷಿಸಿದ್ದು, ಇನ್ನುಳಿದ ಮೂವರು ದುರದೃಷ್ಟವಶಾತ್ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಮುಂಜಾನೆ 4:30ಕ್ಕೆ ಸಂಭವಿಸಿದ ಘೋರ ದುರಂತ   ನಾಗೋರಿ ಪರಿಸರದಲ್ಲಿರುವ ಹಂಚಿನ ಮನೆಯೊಂದರ ಪಕ್ಕದಲ್ಲಿದ್ದ ಗುಡ್ಡ ಇಂದು ಬೆಳಗಿನ ಜಾವ ಸುಮಾರು 4:30ರ ಸುಮಾರಿಗೆ ಏಕಾಏಕಿ ಕುಸಿದು ಬಿದ್ದಿದೆ. ಮಣ್ಣಿನ ಭಾರಕ್ಕೆ ಹಂಚಿನ ಮನೆ ಸಂಪೂರ್ಣವಾಗಿ ಧರಾಶಾಹಿಯಾಗಿದೆ. ಈ ಜಾಗದಲ್ಲಿ ಕಳೆದ 20 ವರ್ಷಗಳಿಂದ ಬಾಡಿಗೆ ಆಧಾರದ ಮೇಲೆ ವಾಸವಿದ್ದ ಬಿಹಾರ ಮೂಲದ ಕುಟುಂಬವೊಂದು ಘಟನೆಯಲ್ಲಿ ತುತ್ತಾಗಿದೆ. ನಿದ್ರೆಯಲ್ಲಿದ್ದಾಗಲೇ ಮಣ್ಣಿನ ರಾಶಿ ಮೈಮೇಲೆ ಬಿದ್ದಿದ್ದರಿಂದ ಯಾರಿಗೂ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.

ಮೃತ ದುರ್ದೈವಿಗಳು ಅನಾಮಿಕ ಚೌರಾಸಿಯ (7 ವರ್ಷ),ತನು (3 ವರ್ಷ),ಶಾಂತ (35 ವರ್ಷ).ಗಾಯಗೊಂಡಿರುವ ಅಲ್ಕಾ (14 ವರ್ಷ),ಅನುಷಾ (11 ವರ್ಷ) ಹಾಗೂ ಬಾಲಕೃಷ್ಣ (48 ವರ್ಷ) ಮೂವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಯುದ್ಧೋಪಾದಿಯಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆ   ಘಟನೆಯ ಭೀಕರತೆಯನ್ನು ಅರಿತ ಜಿಲ್ಲಾಡಳಿತ ತಕ್ಷಣವೇ ಎನ್‌ಡಿಆರ್‌ಎಫ್ (NDRF) ತಂಡವನ್ನು ಸ್ಥಳಕ್ಕೆ ಕರೆಸಿಕೊಂಡಿತು. ಸ್ಥಳೀಯ ಪೊಲೀಸರು,ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಎಫ್ ಸಿಬ್ಬಂದಿ ಜಂಟಿಯಾಗಿ ಅತ್ಯಂತ ವೇಗವಾಗಿ ಕಾರ್ಯಾಚರಣೆ ನಡೆಸಿದರು.ಮಣ್ಣಿನ ಅಡಿಯಿಂದ ಮೂವರನ್ನು ಜೀವಂತವಾಗಿ ಹೊರತೆಗೆಯುವಲ್ಲಿ ಯಶಸ್ವಿಯಾದರಾದರೂ, ತೀವ್ರವಾಗಿ ಮಣ್ಣು ಮುಚ್ಚಿಹೋಗಿದ್ದ ಇಬ್ಬರು ಪುಟ್ಟ ಮಕ್ಕಳು ಹಾಗೂ ಮಹಿಳೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. ಸದ್ಯ ರಕ್ಷಣಾ ಕಾರ್ಯಾಚರಣೆ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ.

ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?                                "ಬೆಳಗಿನ ಜಾವ ಶಬ್ದ ಕೇಳಿ ಹೊರಬಂದು ನೋಡಿದಾಗ ಹಂಚಿನ ಮನೆ ಸಂಪೂರ್ಣ ಮಣ್ಣಿನಡಿ ಸಿಲುಕಿತ್ತು. ಗುಡ್ಡ ಕುಸಿಯುತ್ತಿರುವುದನ್ನು ಕಂಡು ನಾವೂ ಜೀವಭಯದಿಂದ ಓಡಿ ಬಂದೆವು. ಮನೆಯ ಹಿಂಭಾಗದಲ್ಲಿ ತಡೆಗೋಡೆ ಇದ್ದರೂ ಪ್ರಕೃತಿಯ ವಿಕೋಪದ ಮುಂದೆ ಅದು ಉಳಿಯಲಿಲ್ಲ. ನಮ್ಮ ಮನೆ ಸೇರಿದಂತೆ ಒಟ್ಟು ನಾಲ್ಕು ಬಾಡಿಗೆ ಮನೆಗಳು ಹಾನಿಗೊಳಗಾಗಿವೆ," ಎಂದು ಪ್ರತ್ಯಕ್ಷದರ್ಶಿ ಗೀತಾ ಆತಂಕ ಹಂಚಿಕೊಂಡಿದ್ದಾರೆ.

ಮತ್ತೊಬ್ಬ ಸ್ಥಳೀಯ ನಿವಾಸಿ ಜಗದೀಶ್ ಮಾತನಾಡಿ, "ಸುದ್ದಿ ತಿಳಿಯುತ್ತಿದ್ದಂತೆ ಕತ್ತಲಲ್ಲೇ ಓಡಿ ಬಂದೆವು. ನಾಲ್ಕು ಮನೆಗಳ ತಡೆಗೋಡೆಗಳು ಧ್ವಂಸವಾಗಿದ್ದವು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದೆವು. ಕಳೆದ 15 ವರ್ಷಗಳಿಂದ ನಾವು ಇಲ್ಲೇ ಇದ್ದೇವೆ, ಎಂದೂ ಇಂತಹ ಪರಿಸ್ಥಿತಿ ಬಂದಿರಲಿಲ್ಲ," ಎಂದು ಬೇಸರ ವ್ಯಕ್ತಪಡಿಸಿದರು.

ಸ್ಥಳಕ್ಕೆ ಅಧಿಕಾರಿಗಳ ಭೇಟಿ

ದುರಂತದ ಸುದ್ದಿ ತಿಳಿಯುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಹಾಗೂ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದ ಅಧಿಕಾರಿಗಳು, ಮುಂದಿನ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಕಂದಾಯ ಹಾಗೂ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.



image