ಮಂಗಳೂರು: ಬಿ.ಸಿ.ರೋಡ್‌ನಲ್ಲಿ ಗುರುವಾರ ಸಂಜೆ ನಡೆದ ಲಾವಣ್ಯ ಅವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ಪ್ರಕ್ರಿಯೆಗಳು ಪೂರ್ಣಗೊಂಡಿವೆ.
ಆಸ್ಪತ್ರೆಯ ಔಪಚಾರಿಕ ಪ್ರಕ್ರಿಯೆಗಳ ಬಳಿಕ ಲಾವಣ್ಯ ಅವರ ಪಾರ್ಥಿವ ಶರೀರವನ್ನು ಅವರ ಸ್ವಗ್ರಾಮವಾದ ಬಂಟ್ವಾಳ ತಾಲೂಕಿನ ಕಕ್ಕೆಪದವಿನ ಕೊಡಂಗೆ ನಿವಾಸಕ್ಕೆ ಸಾಗಿಸಲಾಗಿದೆ. ಸದ್ಯ ಮೃತಳ ನಿವಾಸದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಕುಟುಂಬಸ್ಥರು, ಆಪ್ತರು ಹಾಗೂ ನೂರಾರು ಸಂಖ್ಯೆಯಲ್ಲಿ ಸ್ಥಳೀಯರು ಕಣ್ಣೀರಿನ ವಿದಾಯ ಹೇಳಲು ಆಗಮಿಸುತ್ತಿದ್ದಾರೆ. ಹತ್ಯೆಯ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಭಾರೀ ಶೋಕಾವೃತ ವಾತಾವರಣ ನಿರ್ಮಾಣವಾಗಿದೆ.
ನಡೆದಿದ್ದೇನು?
ಗುರುವಾರ ಸಂಜೆ ಬಿ.ಸಿ.ರೋಡ್‌ನ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಲಾವಣ್ಯ ಅವರು ಮನೆಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದರು. ಈ ವೇಳೆ ಹಠಾತ್ತಾಗಿ ನುಗ್ಗಿದ ದುಷ್ಕರ್ಮಿ, ಹರಿತವಾದ ಮಾರಕಾಸ್ತ್ರದಿಂದ ಲಾವಣ್ಯ ಅವರ ಮೇಲೆ ಬರ್ಬರ ದಾಳಿ ನಡೆಸಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದರು.
ಪೊಲೀಸ್ ತನಿಖೆ ಚುರುಕು:
ಸಾರ್ವಜನಿಕ ಸ್ಥಳದಲ್ಲೇ ನಡೆದ ಈ ಭೀಕರ ಕೊಲೆ ಪ್ರಕರಣ ಕರಾವಳಿಯಾದ್ಯಂತ ತೀವ್ರ ಸಂಚಲನ ಮೂಡಿಸಿದೆ. ಘಟನೆಗೆ ನಿಖರ ಕಾರಣ ಏನೆಂಬುದರ ಕುರಿತು ಬಂಟ್ವಾಳ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಆರೋಪಿಯ ಪತ್ತೆಗಾಗಿ ಜಾಲ ಬೀಸಿದ್ದಾರೆ.
