ದಕ್ಷಿಣ ಕನ್ನಡ

Mangalore: ಬಸ್ಸಿನಲ್ಲಿ ವಿದ್ಯಾರ್ಥಿನಿಯರಿಗೆ ಅಸಭ್ಯ ವರ್ತನೆ; ಖಾಸಗಿ ಬಸ್ ಕಂಡಕ್ಟರ್ ಇರ್ಫಾನ್ ಬಂಧನ


ಮಂಗಳೂರು: ಕಾಲೇಜು ವಿದ್ಯಾರ್ಥಿನಿಯರೆದುರು ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಖಾಸಗಿ ಬಸ್ ಕಂಡಕ್ಟರ್‌ನನ್ನು ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣಾ ಪೊಲೀಸರು ಬಂಧಿಸಿದ್ದಾರೆ.

​ಉಪ್ಪಿನಂಗಡಿ ಸಮೀಪದ ಕಲ್ಲೇರಿಯ ಅಬುಸಾಲಿ ಎಂಬುವವರ ಪುತ್ರ ಇರ್ಫಾನ್ (32) ಬಂಧಿತ ಆರೋಪಿ. ಈತ ಪ್ರಸ್ತುತ ಕರ್ವೆಲುವಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಎಂದು ತಿಳಿದುಬಂದಿದೆ. ಮಂಗಳೂರು-ವಿಟ್ಲ ಮಾರ್ಗವಾಗಿ ಸಂಚರಿಸುವ 'ಸೆಲೇನಾ' ಎಂಬ ಖಾಸಗಿ ಬಸ್ಸಿನಲ್ಲಿ ಈತ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ.

​ಘಟನೆಯ ಹಿನ್ನೆಲೆ:

​ಪೊಲೀಸ್ ಪ್ರಕಟಣೆಯ ಪ್ರಕಾರ, ಜುಲೈ 9ರಂದು ಸಂಜೆ ಸುಮಾರು 5:00 ಗಂಟೆಯ ವೇಳೆಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಆರೋಪಿ ಇರ್ಫಾನ್ ಅತ್ಯಂತ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ವಿದ್ಯಾರ್ಥಿನಿಯರ ಎದುರೇ ವಿಕೃತ ಚೇಷ್ಟೆಗಳನ್ನು ಮಾಡಿ, ಹಿಂದಿನ ಸೀಟಿಗೆ ಬರುವಂತೆ ಸನ್ನೆ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

​ಪೊಲೀಸ್ ಕ್ರಮ:

​ಬಸ್ಸಿನಲ್ಲಿ ನಡೆದ ಈ ವಿಕೃತಿಯ ಕುರಿತು ಸಂತ್ರಸ್ತರು ನೀಡಿದ ದೂರಿನನ್ವಯ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಜುಲೈ 10ರಂದು ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಮುಂದಿನ ಕಾನೂನು ತನಿಖೆಯನ್ನು ಕೈಗೊಂಡಿದ್ದಾರೆ.



image