ದಕ್ಷಿಣ ಕನ್ನಡ

Mangalore : ದೆಹಲಿಯಲ್ಲಿ ರಾಹುಲ್, ಪ್ರಿಯಾಂಕಾ ಬಂಧನ: ಮಂಗಳೂರಿನಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ, ಬಿಜೆಪಿ ಕಚೇರಿ ಚಲೋ ಯತ್ನಿಸಿದ ಕಾರ್ಯಕರ್ತರ ಬಂಧನ

 


ಮಂಗಳೂರು:ದೆಹಲಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ಖಂಡಿಸಿ, ಕರಾವಳಿ ನಗರಿ ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

​ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರ ನಿರ್ದೇಶನದಂತೆ ನಗರದ ಎಂ.ಜಿ. ರಸ್ತೆಯಲ್ಲಿರುವ ಲಾಲ್‌ಬಾಗ್ ಗಾಂಧಿ ಪ್ರತಿಮೆ ಎದುರು ಜಮಾಯಿಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಕೇಂದ್ರ ಸರ್ಕಾರದ ಧೋರಣೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

​ಬಿಜೆಪಿ ಕಚೇರಿ ಮುತ್ತಿಗೆಗೆ ಯತ್ನ – ಪೊಲೀಸರ ಮಧ್ಯಪ್ರವೇಶ

​ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದ ಬಳಿಕ, ಉದ್ವಿಗ್ನಗೊಂಡ ಪ್ರತಿಭಟನಾಕಾರರು ಪಿ.ವಿ.ಎಸ್ ವೃತ್ತದಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕಲು ('ಬಿಜೆಪಿ ಕಚೇರಿ ಚಲೋ') ಮೆರವಣಿಗೆ ಹೊರಟರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪ್ರತಿಭಟನಾಕಾರರನ್ನು ತಡೆದರು.

​ಪೊಲೀಸರ ತಡೆಯನ್ನೂ ಮೀರಿ ಮುನ್ನುಗ್ಗಲು ಯತ್ನಿಸಿದ ಕಾಂಗ್ರೆಸ್ ಮುಖಂಡರನ್ನು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಪ್ರತಿಭಟನೆಯುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಾರ್ಯಕರ್ತರು ತೀವ್ರ ಘೋಷಣೆಗಳನ್ನು ಕೂಗಿ ತಮ್ಮ ವಿರೋಧ ದಾಖಲಿಸಿದರು.



image