
ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಬಿಸಿ ರೋಡ್ ಬಸ್ ನಿಲ್ದಾಣದ ಬಳಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಲಾವಣ್ಯ ಎಂಬ ಯುವತಿಯನ್ನು ಸಾರ್ವಜನಿಕವಾಗಿಯೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತೀವ್ರ ಆಘಾತ ಹಾಗೂ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ದಕ್ಷಿಣ ಕನ್ನಡದಂತಹ ಅತ್ಯಂತ ಸುಶಿಕ್ಷಿತ ಮತ್ತು ಪ್ರಜ್ಞಾವಂತ ಜಿಲ್ಲೆಯಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಇಂತಹ ಹೇಯ ಕೃತ್ಯ ನಡೆದಿರುವುದು ನಿಜಕ್ಕೂ ಆತಂಕಕಾರಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಇಂತಹ ಹಿಂಸಾತ್ಮಕ ಹಾಗೂ ಕಾನೂನುಬಾಹಿರ ಹಾದಿ ಹಿಡಿಯುತ್ತಿರುವುದು ಸಮಾಜಕ್ಕೆ ದೊಡ್ಡ ಎಚ್ಚರಿಕೆ ಗಂಟೆಯಾಗಿದೆ ಎಂದಿದ್ದಾರೆ.
"ಯಾರದೇ ಭಯವಿಲ್ಲದೆ ಸಾರ್ವಜನಿಕವಾಗಿ ಕಾನೂನನ್ನು ಕೈಗೆತ್ತಿಕೊಂಡು ಅಟ್ಟಹಾಸ ಮೆರೆಯುವ ದುಷ್ಕರ್ಮಿಗಳ ವಿರುದ್ಧ ಪೊಲೀಸ್ ಇಲಾಖೆ ಅತ್ಯಂತ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಸರ್ಕಾರ ಮತ್ತು ಗೃಹ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ."
- ಕ್ಯಾ. ಬ್ರಿಜೇಶ್ ಚೌಟ, ಸಂಸದರು
ತ್ವರಿತ ತನಿಖೆಗೆ ಒತ್ತಾಯ:
ಈ ಭೀಕರ ಕೊಲೆ ಪ್ರಕರಣವನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ತಲೆಮರೆಸಿಕೊಂಡಿರುವ ಆರೋಪಿಯನ್ನು ವಿಳಂಬವಿಲ್ಲದೆ ತಕ್ಷಣವೇ ಬಂಧಿಸಿ, ಆತನಿಗೆ ಕಾನೂನಿನಡಿ ಕಠಿಣ ಹಾಗೂ ತ್ವರಿತ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸಂಸದರು ಆಗ್ರಹಿಸಿದ್ದಾರೆ.
ಇದೇ ವೇಳೆ, "ಕ್ರೂರ ಹತ್ಯೆಗೀಡಾದ ಮೃತ ಲಾವಣ್ಯ ಅವರ ಕುಟುಂಬಕ್ಕೆ ಈ ಅಪಾರ ದುಃಖ ಮತ್ತು ಆಘಾತವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ" ಎಂದು ಸಂಸದರು ಸಂತಾಪ ಸೂಚಿಸಿದ್ದಾರೆ