ದಕ್ಷಿಣ ಕನ್ನಡ

Mangalore : ಮಂತ್ರಾಲಯದ ಬಳಿ ಭೀಕರ ಕಾರು ಅಪಘಾತ: ಯಕ್ಷಧ್ರುವ ಪಟ್ಲ ಫೌಂಡೇಶನ್ ಜೊತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ ನಿಧನ

 


ಮಂಗಳೂರು:ಕ್ಷೇತ್ರ ದರ್ಶನ ಮುಗಿಸಿ ಮಂತ್ರಾಲಯದತ್ತ ಪ್ರಯಾಣಿಸುತ್ತಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಪದಾಧಿಕಾರಿಗಳಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಟ್ರಸ್ಟ್‌ನ ಕೇಂದ್ರೀಯ ಘಟಕದ ಜೊತೆ ಕಾರ್ಯದರ್ಶಿ, ಅಶೋಕನಗರ ನಿವಾಸಿ ರವಿಚಂದ್ರ ಶೆಟ್ಟಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

​ಲಭ್ಯವಿರುವ ಮಾಹಿತಿಯಂತೆ, ಟ್ರಸ್ಟ್‌ನ ಸ್ಥಾಪಕರಾದ ಸತೀಶ್ ಶೆಟ್ಟಿ ಪಟ್ಲ ಹಾಗೂ ತಂಡದ ಇತರ ಪದಾಧಿಕಾರಿಗಳು ಎರಡು ಕಾರುಗಳಲ್ಲಿ ತಿರುಪತಿ ಮತ್ತು ಮಂತ್ರಾಲಯ ಪುಣ್ಯಕ್ಷೇತ್ರಗಳ ದರ್ಶನಕ್ಕೆ ತೆರಳಿದ್ದರು. ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿ ತಿರುಪತಿಯಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

​ಸತೀಶ್ ಶೆಟ್ಟಿ ಪಟ್ಲ ಅವರು ಪ್ರಯಾಣಿಸುತ್ತಿದ್ದ ಕಾರು ಸುರಕ್ಷಿತವಾಗಿ ಮಂತ್ರಾಲಯ ತಲುಪಿತ್ತು. ಆದರೆ, ಪ್ರದೀಪ್ ಆಳ್ವ (ಕದ್ರಿ) ಅವರು ಚಲಾಯಿಸುತ್ತಿದ್ದ ಇನ್ನೊಂದು ಕಾರು ಮಂತ್ರಾಲಯ ತಲುಪಲು ಕೇವಲ 10 ನಿಮಿಷ ಬಾಕಿ ಇರುವಾಗ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ನಸುಕಿನ ಜಾವ ನಡೆದ ಈ ಭೀಕರ ಅಪಘಾತದ ತೀವ್ರತೆಗೆ ಕಾರಿನ ಹಿಂಬದಿ ಆಸನದಲ್ಲಿದ್ದ ರವಿಚಂದ್ರ ಶೆಟ್ಟಿ ಅವರು ತೀವ್ರ ಗಾಯಗೊಂಡು ಸ್ಥಳದಲ್ಲೇ ಅಸುನೀಗಿದ್ದಾರೆ.

ಮೂವರಿಗೆ ಗಾಯ:

ಈ ಅಪಘಾತದಲ್ಲಿ ಕಾರಿನಲ್ಲಿದ್ದ ಪುರುಷೋತ್ತಮ್ ಭಂಡಾರಿ ಅವರ ಎರಡೂ ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಚಾಲಕ ಪ್ರದೀಪ್ ಆಳ್ವ ಹಾಗೂ ಸಿಎ ಸುದೇಶ್ ಕುಮಾರ್ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

​ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ. ಪಟ್ಲ ಫೌಂಡೇಶನ್‌ನ ಸಕ್ರಿಯ ಪದಾಧಿಕಾರಿಯಾಗಿದ್ದ ರವಿಚಂದ್ರ ಶೆಟ್ಟಿ ಅವರ ಅಕಾಲಿಕ ಮರಣಕ್ಕೆ ಯಕ್ಷಗಾನ ಕ್ಷೇತ್ರ ಹಾಗೂ ಅಭಿಮಾನಿ ಬಳಗ ತೀವ್ರ ಕಂಬನಿ ಮಿಡಿದಿದೆ.



image