
ನವದೆಹಲಿ: ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಬಾಲಿವುಡ್‌ನ ಖ್ಯಾತ ಹಾಸ್ಯ ನಟ ರಾಜ್‌ಪಾಲ್ ಯಾದವ್ ಅವರಿಗೆ ದೆಹಲಿ ಹೈಕೋರ್ಟ್‌ನಿಂದ ಭಾರಿ ಹಿನ್ನಡೆಯಾಗಿದೆ. ಕೆಳ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಎತ್ತಿಹಿಡಿದಿರುವ ಹೈಕೋರ್ಟ್, ಈ ಹಿಂದೆ ವಿಧಿಸಲಾಗಿದ್ದ 6 ತಿಂಗಳ ಜೈಲು ಶಿಕ್ಷೆಯ ಅವಧಿಯನ್ನು 3 ತಿಂಗಳಿಗೆ ಕಡಿತಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ.
ಕೋರ್ಟ್ ಸೌಲಭ್ಯ ನಿರಾಕರಣೆ
ವಿಚಾರಣೆ ವೇಳೆ ನಟ ರಾಜ್‌ಪಾಲ್ ಯಾದವ್ ಅವರು 'ಅಪರಾಧಿಗಳ ಪರೀಕ್ಷಾ ಕಾಯ್ದೆ' (Probation of Offenders Act) ಅಡಿಯಲ್ಲಿ ತಮ್ಮನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ, ಪ್ರಕರಣದುದ್ದಕ್ಕೂ ಅವರ ನಡವಳಿಕೆ ಹಾಗೂ ಧೋರಣೆಯನ್ನು ಸೂಕ್ಷ್ಮವಾಗಿ ಗಮನಿಸಿದ ನ್ಯಾಯಪೀಠ, ಅವರಿಗೆ ಈ ಕಾನೂನು ಸೌಲಭ್ಯವನ್ನು ನೀಡಲು ಕಡಾಖಂಡಿತವಾಗಿ ನಿರಾಕರಿಸಿದೆ.
ಮಾತು ತಪ್ಪಿದ ನಟ!
ಸಾಲದ ಹಣವನ್ನು ಮರುಪಾವತಿ ಮಾಡುವುದಾಗಿ ರಾಜ್‌ಪಾಲ್ ಯಾದವ್ ಅವರು ಈ ಹಿಂದೆ ಹಲವು ಬಾರಿ ನ್ಯಾಯಾಲಯಕ್ಕೆ ಭರವಸೆ ನೀಡಿದ್ದರು. ಕೋರ್ಟ್ ಅವರಿಗೆ ಸಾಕಷ್ಟು ಸಮಯ ಮತ್ತು ಅವಕಾಶಗಳನ್ನು ನೀಡಿದ್ದರೂ ಸಹ, ಅವರು ಆ ಭರವಸೆಯನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಪತ್ನಿಗೂ ದಂಡದ ಬಿಸಿ
ಇದೇ ಪ್ರಕರಣದಲ್ಲಿ ನಟ ರಾಜ್‌ಪಾಲ್ ಯಾದವ್ ಅವರ ಪತ್ನಿ ರಾಧಾ ಯಾದವ್ ಅವರಿಗೂ ದೆಹಲಿ ಹೈಕೋರ್ಟ್ ಬಿಸಿ ಮುಟ್ಟಿಸಿದ್ದು, ನಿಗದಿತ ಪರಿಹಾರದ ಮೊತ್ತವನ್ನು ಪಾವತಿಸುವಂತೆ ಸೂಚನೆ ನೀಡಿದೆ. ಇನ್ನು ರಾಜ್‌ಪಾಲ್ ಯಾದವ್ ಅವರು ಈಗಾಗಲೇ ಪಾವತಿಸಿರುವ ಹಣವನ್ನು ಅಂತಿಮ ಲೆಕ್ಕಾಚಾರದ ಸಮಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.