ದಕ್ಷಿಣ ಕನ್ನಡ

​Sullia: ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಹೃದಯಾಘಾತಕ್ಕೆ ಬಲಿಯಾದ 9ನೇ ತರಗತಿ ವಿದ್ಯಾರ್ಥಿ:ರಂಗಭೂಮಿ, ಯಕ್ಷಗಾನ ಕಲಾವಿದನ ಅಗಲಿಕೆಗೆ ಸಂತಾಪ

ಸುಳ್ಯ:ತಾಲೂಕಿನ ಎಡಮಂಗಲ ಗ್ರಾಮದಲ್ಲಿ ಅತ್ಯಂತ ಕರುಣಾಜನಕ ಘಟನೆಯೊಂದು ಸಂಭವಿಸಿದೆ. ಕೇವಲ 14 ವರ್ಷದ ಒಂಬತ್ತನೇ ತರಗತಿ ವಿದ್ಯಾರ್ಥಿಯೊಬ್ಬ ಆಸ್ಪತ್ರೆಗೆ ಸಾಗಿಸುವ ಮಧ್ಯೆ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾನೆ. ಎಡಮಂಗಲದ ಕರಿಂಬಿಲ ನಿವಾಸಿಯಾದ ಶಿಶಿಲ್ (14) ಮೃತಪಟ್ಟ ದುರ್ದೈವಿ.ಈತ ಎನ್ನೂರು ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದನು.

ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶಿಶಿಲ್‌ನಿಗೆ ಕಾಣಿಯೂರು, ಪುತ್ತೂರು ಹಾಗೂ ಮಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬರದ ಹಿನ್ನೆಲೆಯಲ್ಲಿ, ಹೆಚ್ಚಿನ ಚಿಕಿತ್ಸೆಗಾಗಿ ಸೋಮವಾರ (ಜುಲೈ 6) ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲು ಪೋಷಕರು ನಿರ್ಧರಿಸಿದ್ದರು.ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಭಾನುವಾರ ರಾತ್ರಿ ವಿದ್ಯಾರ್ಥಿಯ ಆರೋಗ್ಯ ಪರಿಸ್ಥಿತಿ ದಿಢೀರನೆ ಕ್ಷೀಣಿಸಿದೆ. ತಕ್ಷಣವೇ ಆತನನ್ನು ಪುತ್ತೂರಿನ ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತಾದರೂ, ಮಾರ್ಗಮಧ್ಯೆ ತೀವ್ರ ಹೃದಯಾಘಾತ ಸಂಭವಿಸಿ ಆತ ಮೃತಪಟ್ಟಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕಲಾವಿದನ ಅಗಲಿಕೆಗೆ ಕಂಬನಿ:

ಮೃತ ಶಿಶಿಲ್ ಓದಿನಲ್ಲಿ ಮಾತ್ರವಲ್ಲದೆ ಸಾಂಸ್ಕೃತಿಕ ರಂಗದಲ್ಲೂ ಗುರುತಿಸಿಕೊಂಡಿದ್ದ ಪ್ರತಿಭಾವಂತನಾಗಿದ್ದನು. ಯಕ್ಷಗಾನ ಹಾಗೂ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದನು. ಚಿಕ್ಕ ವಯಸ್ಸಿನಲ್ಲೇ ಪ್ರತಿಭಾನ್ವಿತ ಬಾಲಕನೊಬ್ಬ ಇಹಲೋಕ ತ್ಯಜಿಸಿರುವುದು ಸ್ಥಳೀಯರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ. ಮೃತನು ತಂದೆ-ತಾಯಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾನೆ.



image