ಕ್ರೈಂ

​Udupi: ಪೆರ್ಡೂರು ಸಂಜೀವಿನಿ ಒಕ್ಕೂಟದಲ್ಲಿ ₹23 ಲಕ್ಷ ವಂಚನೆ: ಬುಕ್ ಕೀಪರ್ ಹಾಗೂ ಪತಿ ಹಿರಿಯಡಕ ಪೊಲೀಸರ ವಶಕ್ಕೆ


ಉಡುಪಿ: ತಾಲೂಕಿನ ಪೆರ್ಡೂರು ಪದ್ಮಕಮಲ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದಲ್ಲಿ ಸುಮಾರು 23 ಲಕ್ಷ ರೂಪಾಯಿ ಹಣ ದುರ್ಬಳಕೆ ಹಾಗೂ ನಂಬಿಕೆ ದ್ರೋಹ ಎಸಗಿದ ಗಂಭೀರ ಆರೋಪದಡಿ ದಂಪತಿಯನ್ನು ಹಿರಿಯಡಕ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

​ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ್ತಿ (ಬುಕ್ ಕೀಪರ್) ಆಗಿದ್ದ ಸುಗಂಧಿ ಹಾಗೂ ಆಕೆಯ ಪತಿ ಸಂತೋಷ್ ಬಂಧಿತ ಆರೋಪಿಗಳಾಗಿದ್ದಾರೆ.

ನಕಲಿ ಸಹಿ, ದಾಖಲೆ ಸೃಷ್ಟಿಸಿ ವಂಚನೆ

ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ, ಸುಗಂಧಿ ಅವರು 2023 ರಿಂದ 2025 ರ ಅವಧಿಯಲ್ಲಿ ಒಕ್ಕೂಟದ ಸದಸ್ಯರಿಂದ ವಸೂಲಿ ಮಾಡಿದ ಸಾಲ ಮರುಪಾವತಿ ಹಣವನ್ನು ಅಧಿಕೃತ ರಿಜಿಸ್ಟರ್‌ನಲ್ಲಿ ದಾಖಲಿಸಿದ್ದರು. ಆದರೆ, ಆ ಹಣವನ್ನು ಒಕ್ಕೂಟದ ಬ್ಯಾಂಕ್ ಖಾತೆಗೆ ಜಮೆ ಮಾಡದೆ ವೈಯಕ್ತಿಕವಾಗಿ ದುರುಪಯೋಗಪಡಿಸಿಕೊಂಡಿದ್ದರು.

​ಇಷ್ಟೇ ಅಲ್ಲದೆ, ವಿವಿಧ ಸಂಘಗಳ ಹೆಸರಿನಲ್ಲಿ ಒಕ್ಕೂಟದ ಚೆಕ್‌ಗಳನ್ನು ಬಳಸಿ, ಅದಕ್ಕೆ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರ ನಕಲಿ ಸಹಿ ಹಾಕಿ ಬ್ಯಾಂಕ್‌ನಿಂದ ಲಕ್ಷಾಂತರ ರೂಪಾಯಿ ಹಣ ಡ್ರಾ ಮಾಡಿ ವಂಚಿಸಿರುವುದು ಬೆಳಕಿಗೆ ಬಂದಿದೆ.

ಆಡಿಟಿಂಗ್‌ನಿಂದ ತಪ್ಪಿಸಿಕೊಳ್ಳಲು ಸ್ಕೆಚ್!

​ವಾರ್ಷಿಕ ಲೆಕ್ಕಪರಿಶೋಧನೆ ವೇಳೆ ಈ ವಂಚನೆ ತಕ್ಷಣಕ್ಕೆ ಅಧಿಕಾರಿಗಳ ಗಮನಕ್ಕೆ ಬಾರದಿರಲಿ ಎಂಬ ಉದ್ದೇಶದಿಂದ ಆರೋಪಿಗಳು ನಕಲಿ ಸಾಲದ ಖಾತೆ ಪುಸ್ತಕಗಳನ್ನು ನಿರ್ವಹಿಸುತ್ತಿದ್ದರು. ಕಾರ್ಯಕಾರಿ ಸಮಿತಿಗೆ ಯಾವುದೇ ಅನುಮಾನ ಬಾರದ ರೀತಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಒಟ್ಟು 23 ಲಕ್ಷ ರೂಪಾಯಿ ವಂಚಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.

​ಈ ಹಗರಣಕ್ಕೆ ಸಂಬಂಧಿಸಿದಂತೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಉಡುಪಿ ಉಪವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು. ಅವರ ನಿರ್ದೇಶನ ಹಾಗೂ ವೃತ್ತ ನಿರೀಕ್ಷಕ ಗೋಪೀಕೃಷ್ಣ ಅವರ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತರಾದ ಹಿರಿಯಡಕ ಪಿಎಸ್ಐ ಪುನೀತ್ ಕುಮಾರ್ ಬಿ.ಇ. ಮತ್ತು ತನಿಖಾ ಪಿಎಸ್ಐ ವಿಠ್ಠಲ ಮಲವಡಕರ ನೇತೃತ್ವದ ಜಂಟಿ ಪೊಲೀಸ್ ತಂಡವು ಜುಲೈ 6 ರಂದು ಆರೋಪಿ ದಂಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

​ಆರೋಪಿಗಳು ವಿವಿಧ ಸದಸ್ಯರ ಹೆಸರಿನಲ್ಲಿ ನಕಲಿ ಸಹಿ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ಲೂಟಿ ಮಾಡಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.



image