ಉಡುಪಿ

Udupi : ಬ್ರಹ್ಮಾವರದಲ್ಲಿ 9ನೇ ತರಗತಿ ಬಾಲಕನ ಕಿಡ್ನ್ಯಾಪ್, ಹಲ್ಲೆ: ಇಬ್ಬರು ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು!

 


ಉಡುಪಿ:

ಜಿಲ್ಲೆಯ ಬ್ರಹ್ಮಾವರದಲ್ಲಿ ತಲ್ಲಣ ಮೂಡಿಸಿದ್ದ ಅಪ್ರಾಪ್ತ ಬಾಲಕನ ಅಪಹರಣ, ಅಮಾನವೀಯ ಹಲ್ಲೆ ಹಾಗೂ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಸ್ ನಿಲ್ದಾಣದಿಂದಲೇ ಬಾಲಕನ ಕಿಡ್ನ್ಯಾಪ್!

ಮಟಪಾಡಿ ಗ್ರಾಮದ ನಿವಾಸಿಯೊಬ್ಬರ ಅಪ್ರಾಪ್ತ ಪುತ್ರ, ಬ್ರಹ್ಮಾವರದ ಸರ್ಕಾರಿ ಬೋರ್ಡ್ ಹೈಸ್ಕೂಲ್‌ನಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾನೆ. ಜೂನ್ 1ರಂದು ಬೆಳಿಗ್ಗೆ ಬ್ರಹ್ಮಾವರ ಬಸ್ ನಿಲ್ದಾಣಕ್ಕೆ ಬಂದಿದ್ದ ಬಾಲಕನನ್ನು ಆರೋಪಿಗಳು ಬಲವಂತವಾಗಿ ಅಪಹರಿಸಿದ್ದರು. ಅಲ್ಲಿಂದ ಆತನನ್ನು ಕೇರಳದ ತಲಪಾಡಿ ಸಮೀಪದ ಕುಂಜತ್ತೂರು ಪದವಿನಲ್ಲಿರುವ ವುಡ್ ಕಂಪನಿಯೊಂದಕ್ಕೆ ಕರೆದೊಯ್ದು, ಬಲವಂತವಾಗಿ ಕೆಲಸಕ್ಕೆ ಸೇರಿಸಲಾಗಿತ್ತು ಎಂದು ತಿಳಿದುಬಂದಿದೆ.

ವೈರ್‌ನಿಂದ ಹಲ್ಲೆ, ಚೂರಿ ತೋರಿಸಿ ಜೀವ ಬೆದರಿಕೆ!

ತನ್ನನ್ನು ಮನೆಗೆ ಕಳುಹಿಸುವಂತೆ ಬಾಲಕ ಬೇಡಿಕೊಂಡರೂ ಬಿಡದ ನರಾಧಮರು, ಜೂನ್ 9ರಂದು ಆತನ ಮೇಲೆ ಕ್ರೌರ್ಯ ಮೆರೆದಿದ್ದಾರೆ. ಆರೋಪಿಗಳಲ್ಲೊಬ್ಬ ವೈರ್‌ನಿಂದ ಬಾಲಕನಿಗೆ ಮನಬಂದಂತೆ ಥಳಿಸಿದ್ದರೆ, ಮತ್ತೊಬ್ಬ ಆರೋಪಿ ಚೂರಿ ತೋರಿಸಿ ಹೆದರಿಸಿದ್ದಾನೆ. "ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ" ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇಷ್ಟೇ ಅಲ್ಲದೆ, ಈ ಇಡೀ ಘಟನೆಯನ್ನು ಮೂರನೇ ಆರೋಪಿ ತನ್ನ ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಣ ಮಾಡಿಕೊಂಡಿರುವುದು ದೂರಿನಲ್ಲಿ ಬೆಳಕಿಗೆ ಬಂದಿದೆ.

 ಇಬ್ಬರ ಬಂಧನ, ಒಬ್ಬ ಬಾಲಾಪರಾಧಿ

ಈ ದಾರುಣ ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 117/2026 ರಡಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಗಂಭೀರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರಕರಣದ ಪ್ರಮುಖ ಆರೋಪಿಗಳಾದ ವಿಖ್ಯಾತ್ ಆಚಾರ್ಯ (19) ಹಾಗೂ ಸುಚಿತ್ ನಾಯಕ್ (20) ಎಂಬುವವರನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲು ಕ್ರಮ ಕೈಗೊಂಡಿದ್ದಾರೆ. ಇನ್ನು ಈ ಕೃತ್ಯದಲ್ಲಿ ಭಾಗಿಯಾಗಿದ್ದ ಮೂರನೇ ಆರೋಪಿ ಅಪ್ರಾಪ್ತನಾಗಿದ್ದರಿಂದ (ಬಾಲಾಪರಾಧಿ), ಆತನನ್ನು ಬಾಲ ನ್ಯಾಯ ಮಂಡಳಿಯ (Juvenile Justice Board) ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.




image