
ಉಡುಪಿ: ನಗರದ ಹೃದಯಭಾಗದಲ್ಲಿರುವ ಸಿಟಿ ಬಸ್ ನಿಲ್ದಾಣವು ಕೆಲಕಾಲ ಯುದ್ಧಭೂಮಿಯಂತಾಗಿ ಮಾರ್ಪಟ್ಟಿತ್ತು. ಕೇವಲ ಸಮಯದ ಕಿರಿಕಿರಿಗಾಗಿ ಇಬ್ಬರು ಖಾಸಗಿ ಸಿಟಿ ಬಸ್ ಚಾಲಕರು ಸಾರ್ವಜನಿಕರ ಎದುರೇ ಸಿನಿಮೀಯ ಶೈಲಿಯಲ್ಲಿ ಬಸ್‌ಗಳನ್ನು ಪರಸ್ಪರ ಡಿಕ್ಕಿ ಹೊಡೆಸಿಕೊಂಡು ಹುಚ್ಚಾಟ ಮೆರೆದ ಆಘಾತಕಾರಿ ಘಟನೆ ನಡೆದಿದೆ.
ಮೂಲಗಳ ಪ್ರಕಾರ, ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಟಿಎಂಟಿ (TMT) ಸಂಸ್ಥೆಗೆ ಸೇರಿದ ಬಸ್ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೊರಡಲು ಸಿದ್ಧವಾಗಿ ನಿಂತಿತ್ತು. ಇದೇ ವೇಳೆ ಅಲ್ಲಿಗೆ ಬಂದ ಪಿಎಂಟಿ (PMT) ಬಸ್‌ನ ಚಾಲಕ, ಟಿಎಂಟಿ ಬಸ್‌ಗೆ ಅಡ್ಡಲಾಗಿ ತಂದು ನಿಲ್ಲಿಸಿದ್ದಾನೆ ಎನ್ನಲಾಗಿದೆ. ಇದರಿಂದ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಆಕ್ರೋಶದ ಕಟ್ಟೆ ಒಡೆದ ಟಿಎಂಟಿ ಬಸ್ ಚಾಲಕ ತನ್ನ ವಾಹನದಿಂದ ಎದುರಿಗಿದ್ದ ಪಿಎಂಟಿ ಬಸ್‌ಗೆ ಉದ್ದೇಶಪೂರ್ವಕವಾಗಿಯೇ ಎರಡು ಬಾರಿ ಬಲವಾಗಿ ಡಿಕ್ಕಿ ಹೊಡೆಸಿದ್ದಾನೆ.
ಬಸ್‌ನಲ್ಲಿದ್ದ ಪ್ರಯಾಣಿಕರು ಚಾಲಕನ ಈ ದಿಢೀರ್ ಉನ್ಮಾದದ ವರ್ತನೆಯಿಂದ ತೀವ್ರ ಆತಂಕಕ್ಕೊಳಗಾಗಿ ಕಿರುಚಾಡಿದ್ದಾರೆ. ತಕ್ಷಣವೇ ಬಸ್‌ನಿಂದ ಕೆಳಗಿಳಿದು ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಹಾಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಸಾರ್ವಜನಿಕರ ಆಕ್ರೋಶ, ಕಠಿಣ ಕ್ರಮಕ್ಕೆ ಆಗ್ರಹ: ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಹಾಗೂ ಬಸ್ ಪ್ರಯಾಣಿಕರ ಪ್ರಾಣದ ಜೊತೆ ಈ ರೀತಿ ಚೆಲ್ಲಾಟವಾಡುವ ಚಾಲಕರ ವಿರುದ್ಧ ಉಡುಪಿ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಕೆಲವು ಸಿಟಿ ಬಸ್ ಚಾಲಕರು ರಸ್ತೆಯನ್ನು ತಮ್ಮ ಜಾಗೀರ್ ಎಂಬಂತೆ ಭಾವಿಸಿ ಬೇಕಾಬಿಟ್ಟಿ ವರ್ತಿಸುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ಘಟನೆಗಳನ್ನು ಸಾರಿಗೆ ಇಲಾಖೆ ಹಾಗೂ ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು. ನಿಯಮ ಉಲ್ಲಂಘಿಸಿ, ಸಾರ್ವಜನಿಕರ ಜೀವಕ್ಕೆ ಕುತ್ತು ತರುವ ಬಸ್‌ಗಳ ರಹದಾರಿ (ಪರ್ಮಿಟ್) ಹಾಗೂ ಚಾಲಕರ ಲೈಸೆನ್ಸ್ ಅನ್ನು ತಕ್ಷಣವೇ ರದ್ದುಗೊಳಿಸಬೇಕು," ಎಂದು ಸಾರ್ವಜನಿಕರು ಗಟ್ಟಿಯಾಗಿ ಒತ್ತಾಯಿಸಿದ್ದಾರೆ.