ದಕ್ಷಿಣ ಕನ್ನಡ

Ujire: ಬೆನಕ ಆಸ್ಪತ್ರೆಗೆ 130 ಹಾಸಿಗೆಗಳ ಬಲ: ವೈದ್ಯರ ದಿನಾಚರಣೆಯಂದು ಬಡ ರೋಗಿಗೆ ಉಚಿತ ಚಿಕಿತ್ಸೆ ಘೋಷಣೆ

ಉಜಿರೆ : "ಕೇವಲ 7 ಹಾಸಿಗೆಗಳೊಂದಿಗೆ ಅತ್ಯಂತ ಸರಳವಾಗಿ ಆರಂಭವಾದ ನಮ್ಮ ಬೆನಕ ಆಸ್ಪತ್ರೆ, ಇಂದು 130 ಹಾಸಿಗೆಗಳ ಸುಸಜ್ಜಿತ ಸಂಸ್ಥೆಯಾಗಿ ಬೆಳೆದು ನಿಂತಿದೆ. ಈ ಯಶಸ್ಸು ಕೇವಲ ನನ್ನೊಬ್ಬನದಲ್ಲ. ಇದಕ್ಕೆ ತಾಲೂಕಿನ ಜನತೆ, ಸಹೋದ್ಯೋಗಿ ವೈದ್ಯರು, ನನ್ನ ಕುಟುಂಬ ಹಾಗೂ ಆಸ್ಪತ್ರೆಯ ಪ್ರತಿಯೊಬ್ಬ ಸಿಬ್ಬಂದಿಯ ನಿರಂತರ ಸಹಕಾರವೇ ಕಾರಣ" ಎಂದು ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಗೋಪಾಲಕೃಷ್ಣ ಅವರು ಕೃತಜ್ಞತೆ ಸಲ್ಲಿಸಿದರು.

ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಸಂಸ್ಥೆಯ ಬೆಳವಣಿಗೆಗೆ ಹೆಗಲುಕೊಟ್ಟ ಪ್ರತಿಯೊಬ್ಬರ ಪ್ರೋತ್ಸಾಹವನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.

ವೈದ್ಯರಿಗೆ ಗೌರವ - ಮಾನವೀಯತೆ ಮೆರೆದ ಆಸ್ಪತ್ರೆ     ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವಿಶೇಷ ಆಹ್ವಾನದ ಮೇರೆಗೆ ಆಗಮಿಸಿದ್ದ ತಾಲೂಕಿನ ಹಲವಾರು ಪ್ರಮುಖ ವೈದ್ಯರನ್ನು ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು.

ಇದೇ ವೇಳೆ ಬೆನಕ ಆಸ್ಪತ್ರೆಯು ತನ್ನ ಸಾಮಾಜಿಕ ಬದ್ಧತೆಯನ್ನು ಮೆರೆಯಿತು. ಡೆಂಗ್ಯೂ ಜ್ವರದಿಂದ ತೀವ್ರವಾಗಿ ಬಳಲುತ್ತಾ, ಪ್ಲೇಟ್ಲೆಟ್ ಸಂಖ್ಯೆ ಕುಸಿದು ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ ನಿಡ್ಲೆ ಗ್ರಾಮದ ನಿವಾಸಿ ಕರಿಯ (50 ವರ್ಷ) ಅವರಿಗೆ ಆಸ್ಪತ್ರೆಯ ವತಿಯಿಂದ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವುದಾಗಿ ವೈದ್ಯಕೀಯ ನಿರ್ದೇಶಕರು ಅಧಿಕೃತವಾಗಿ ಪ್ರಕಟಿಸಿದರು. ಆರ್ಥಿಕವಾಗಿ ತೀರಾ ಹಿಂದುಳಿದಿರುವ ಈ ರೋಗಿಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸಂಸ್ಥೆಯೇ ಭರಿಸಲಿದೆ ಎಂದು ಅವರು ತಿಳಿಸಿದರು.

ಡಾ. ಅಂಕಿತಾ ಜಿ. ಭಟ್ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ ಡಾ. ಆದಿತ್ಯ ರಾವ್ ಅವರು ಮುಖ್ಯ ಅತಿಥಿಗಳಾದ ಡಾ. ಎನ್.ಎಂ. ತುಳಪುಳೆ ಅವರನ್ನು ಸಭೆಗೆ ಪರಿಚಯಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಡಾ. ಭಾರತಿ ಜಿ.ಕೆ. ಅವರು ಧನ್ಯವಾದ ಸಮರ್ಪಿಸಿದರು.



image