ಮಂಗಳೂರು, ಜುಲೈ 17:ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಸಮುದ್ರ ತೀರದಲ್ಲಿ ಇಂದು ಪ್ರಕೃತಿಯ ಅಪರೂಪದ ವಿಸ್ಮಯವೊಂದು ಸಂಭವಿಸಿದ್ದು, ಕಡಲತೀರದ ಮರಳಿನ ಮೇಲೆ ಲಕ್ಷಾಂತರ ಸಂಖ್ಯೆಯ ಬೂತಾಯಿ ಮೀನುಗಳು ಬಂದು ಬಿದ್ದಿವೆ. ಕಣ್ಣು ಹಾಯಿಸಿದ ಕಡೆಯಲ್ಲೆಲ್ಲಾ ಬೆಳ್ಳಿಯ ರಾಶಿ ಬಿದ್ದಂತೆ ಕಂಗೊಳಿಸುತ್ತಿದ್ದ ಈ ದೃಶ್ಯವನ್ನು ಕಂಡು ಸ್ಥಳೀಯರು ಮತ್ತು ಪ್ರವಾಸಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.
ಘಟನೆಗೆ ಅಸಲಿ ಕಾರಣವೇನು?
ಸಾಮಾನ್ಯವಾಗಿ ಆಳ ಸಮುದ್ರದಲ್ಲಿ ಸಾಗುವ ಬೂತಾಯಿ ಮೀನುಗಳು ಯಾವಾಗಲೂ ಬೃಹತ್ ಗುಂಪುಗಳಲ್ಲಿ ಚಲಿಸುತ್ತವೆ. ಇಂದು ಕೂಡ ಇಂತಹದ್ದೇ ಒಂದು ದೊಡ್ಡ ಮೀನುಗಳ ಹಿಂಡು ಚಲಿಸುತ್ತಿದ್ದಾಗ, ಆಕಸ್ಮಿಕವಾಗಿ ನಾಡದೋಣಿಯೊಂದು ಎದುರಾಗಿದೆ ಎನ್ನಲಾಗಿದೆ. ಇದರಿಂದ ಗಾಬರಿಗೊಂಡ ಮೀನಿನ ದಂಡು ದಿಕ್ಕಾಪಾಲಾಗಿ ದಡದ ಕಡೆಗೆ ಮುಖ ಮಾಡಿದೆ. ಇದೇ ವೇಳೆ ಸಮುದ್ರದಲ್ಲಿ ಎದ್ದ ಭಾರಿ ಅಲೆಗಳ ರಭಸಕ್ಕೆ ಸಿಲುಕಿದ ಇಡೀ ಮೀನಿನ ಸಮೂಹವು ಒಮ್ಮಿಂದೊಮ್ಮೆಗೆ ಉಳ್ಳಾಲ ಕಡಲತೀರಕ್ಕೆ ಬಂದು ಬಿದ್ದಿದೆ. ಅಲೆಗಳ ವೇಗಕ್ಕೆ ಮರಳಿನ ಮೇಲೆ ಬಿದ್ದ ಮೀನುಗಳಿಗೆ ಮರಳಿ ಸಮುದ್ರ ಸೇರಲು ಸಾಧ್ಯವಾಗದೆ ತೀರದಲ್ಲೇ ಒದ್ದಾಡತೊಡಗಿದವು.
ಮೀನು ಹಿಡಿಯಲು ಮುಗಿಬಿದ್ದ ಜನಸ್ತೋಮ:
ಸಮುದ್ರ ತೀರದಲ್ಲಿ ಜೀವಂತ ಬೂತಾಯಿ ಮೀನುಗಳು ರಾಶಿ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಉಳ್ಳಾಲ ಸುತ್ತಮುತ್ತಲಿನ ಗ್ರಾಮಸ್ಥರು ಕಡಲತೀರದತ್ತ ಧಾವಿಸಿದ್ದಾರೆ. ಕೈಗೆ ಸಿಕ್ಕ ಬಕೆಟ್‌ಗಳು, ಪ್ಲಾಸ್ಟಿಕ್ ಚೀಲಗಳು ಹಾಗೂ ಬುಟ್ಟಿಗಳನ್ನು ಹಿಡಿದುಕೊಂಡು ಬಂದ ನೂರಾರು ಜನರು ಮುಗಿಬಿದ್ದು ಉಚಿತವಾಗಿ ಸಿಕ್ಕ ಮೀನುಗಳನ್ನು ಹಿಡಿದು ಮನೆಗೆ ಕೊಂಡೊಯ್ದರು. ಸದ್ಯ ಈ ವಿಶಿಷ್ಟ ದೃಶ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.
