ಲಕ್ನೋ: ಮಹಾರಾಷ್ಟ್ರದ ಬೆನ್ನಲ್ಲೇ ಇದೀಗ ಉತ್ತರ ಪ್ರದೇಶದಲ್ಲೂ ಶಿಕ್ಷಕರ ಅರ್ಹತಾ ಪರೀಕ್ಷೆ (UP TET) ವೇಳೆ ಭಾರಿ ವಂಚನೆ ಜಾಲವೊಂದು ಬಯಲಾಗಿದ್ದು, ಅಕ್ರಮ ಎಸಗಲು ಯತ್ನಿಸಿದ 15 ಮಂದಿ ನಕಲಿ ಅಭ್ಯರ್ಥಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಉತ್ತರ ಪ್ರದೇಶದಲ್ಲಿ ಇಂದಿನಿಂದ (ಗುರುವಾರ) ಮೂರು ದಿನಗಳ ಕಾಲ ನಡೆಯಲಿರುವ ಶಿಕ್ಷಕರ ಅರ್ಹತಾ ಪರೀಕ್ಷೆ ಆರಂಭಗೊಂಡಿದೆ. ಮೊದಲ ದಿನ ಕಠಿಣ ಭದ್ರತೆಯ ನಡುವೆಯೂ ಅಸಲಿ ಅಭ್ಯರ್ಥಿಗಳ ಪರವಾಗಿ ಪರೀಕ್ಷೆ ಬರೆಯಲು ಬಂದಿದ್ದ ನಕಲಿ ಮುಖಗಳು ಸಿಸಿಟಿವಿ ಹಾಗೂ ಅಧಿಕಾರಿಗಳ ಕಣ್ಣಿಗೆ ಬಿದ್ದಿವೆ.
ಮೊದಲ ದಿನವೇ ಸಿಕ್ಕಿಬಿದ್ದ ಖತರ್ನಾಕ್ ಜಾಲ
ರಾಜ್ಯದ ಒಟ್ಟು 60 ಜಿಲ್ಲೆಗಳ 955 ಪರೀಕ್ಷಾ ಕೇಂದ್ರಗಳಲ್ಲಿ ಬರೋಬ್ಬರಿ 6.84 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಮೊದಲ ದಿನ ಪರೀಕ್ಷೆ ಬರೆದಿದ್ದಾರೆ. ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ಕಣ್ಗಾವಲು ಹಾಗೂ ಕಟ್ಟುನಿಟ್ಟಿನ ತಪಾಸಣೆಯ ನಡುವೆಯೂ ಕೆಲವರು ನಕಲಿ ದಾಖಲೆ ಸೃಷ್ಟಿಸಿ ಪರೀಕ್ಷಾ ಕೊಠಡಿ ಸೇರಿದ್ದರು.
ಬೆಳಗ್ಗಿನ ಮೊದಲ ಅವಧಿಯ (9:30 ರಿಂದ 12:00) ಪರೀಕ್ಷೆ ವೇಳೆ ತಪಾಸಣೆ ನಡೆಸಿದಾಗ 7 ಮಂದಿ ನಕಲಿ ಅಭ್ಯರ್ಥಿಗಳು ಸಿಕ್ಕಿಬಿದ್ದಿದ್ದಾರೆ. ಇನ್ನು ಮಧ್ಯಾಹ್ನದ ಎರಡನೇ ಅವಧಿಯ (2:30 ರಿಂದ 5:00) ಪರೀಕ್ಷೆ ವೇಳೆ ಮತ್ತೊಬ್ಬರ ಪರವಾಗಿ ಪರೀಕ್ಷೆ ಬರೆಯುತ್ತಿದ್ದ 8 ಜನರನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ತನಿಖೆ ಚುರುಕುಗೊಳಿಸಿದ ಪೊಲೀಸರು
"ಬಂಧಿತರೆಲ್ಲರೂ ಹಣದಾಸೆಗೆ ಬಿದ್ದು ಅಸಲಿ ನೋಂದಾಯಿತ ಅಭ್ಯರ್ಥಿಗಳ ಜಾಗದಲ್ಲಿ ಕುಳಿತು ಪರೀಕ್ಷೆ ಬರೆಯಲು ಬಂದಿದ್ದರು. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಇವರ ಹಿಂದೆ ದೊಡ್ಡ ಪರೀಕ್ಷಾ ದಂಧೆಕೋರರ ಜಾಲವಿರುವ ಶಂಕೆಯಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ" ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಮೊದಲ ದಿನದ ಪರೀಕ್ಷೆ ಕೆಲವು ವಂಚನೆ ಘಟನೆಗಳನ್ನು ಹೊರತುಪಡಿಸಿ ಉಳಿದೆಡೆ ಶಾಂತಿಯುತ ಹಾಗೂ ಸುಸೂತ್ರವಾಗಿ ಮುಕ್ತಾಯಗೊಂಡಿದೆ.
