
ವೇಣೂರು: ನಿಯಂತ್ರಣ ತಪ್ಪಿ ಬಂದ ಗೂಡ್ಸ್ ರಿಕ್ಷಾವೊಂದು ದ್ವಿಚಕ್ರ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿರುವ ದುರ್ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ನಿಟ್ಟಡೆ ಎಂಬಲ್ಲಿ ಭಾನುವಾರ (ಜುಲೈ 5) ತಡರಾತ್ರಿ ಸಂಭವಿಸಿದೆ.
ಕರಿಮಣೇಲು ಗ್ರಾಮದ ಗಾಂಧಿನಗರ ತಿಮರಡ್ಡ ನಿವಾಸಿ ರವೀಂದ್ರ ಮೂಲ್ಯ (47) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಬೈಕ್‌ನಲ್ಲಿದ್ದ ಅವರ ಸಹೋದರ ಜಗದೀಶ್ ಮೂಲ್ಯ ಅವರ ಕಾಲುಗಳಿಗೆ ಬಲವಾದ ಪೆಟ್ಟಾಗಿದ್ದು, ಸದ್ಯ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಮೃತ ರವೀಂದ್ರ ಹಾಗೂ ಜಗದೀಶ್ ಅವರು ಗಾರೆ ಕೆಲಸ ಮಾಡಿಕೊಂಡಿದ್ದರು. ಜುಲೈ 5ರ ಭಾನುವಾರ ಕೆಲಸ ಮುಗಿಸಿ ಇಬ್ಬರೂ ಗುರುವಾಯನಕೆರೆಯಿಂದ ವೇಣೂರು ಕಡೆಗೆ ಬೈಕ್‌ನಲ್ಲಿ ವಾಪಸ್ಸು ಬರುತ್ತಿದ್ದರು. ಈ ವೇಳೆ ವೇಣೂರಿನಿಂದ ಸಂಚರಿಸುತ್ತಿದ್ದ ಗೂಡ್ಸ್ ರಿಕ್ಷಾವೊಂದು ನಿಟ್ಟಡೆಯ ಕುಂಭಶ್ರೀ ಶಾಲೆಯ ಬಳಿ ಇವರ ದ್ವಿಚಕ್ರ ವಾಹನಕ್ಕೆ ನೇರವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಗೆ ಬೈಕ್ ರಸ್ತೆಗೆ ಉರುಳಿಬಿದ್ದಿದ್ದು, ರವೀಂದ್ರ ಅವರ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಪ್ರಾಣಪಕ್ಷಿ ಹಾರಿಹೋಗಿದೆ. ಅಪಘಾತದ ಬೆನ್ನಲ್ಲೇ ರಿಕ್ಷಾ ಚಾಲಕ ಹಾಗೂ ಸ್ಥಳೀಯರು ತಕ್ಷಣ ರಕ್ಷಣೆಗೆ ಧಾವಿಸಿ, ರಕ್ತದ ಮಡುವಿನಲ್ಲಿದ್ದ ಜಗದೀಶ್ ಅವರನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದಾರೆ.
ದುರಂತಕ್ಕೆ ಕಾರಣವಾಯ್ತಾ ರಸ್ತೆ ಗುಂಡಿ ಮತ್ತು ಸಿಂಗಲ್ ಲೈಟ್?
ವೇಣೂರಿನಲ್ಲಿ ತರಕಾರಿ ವ್ಯಾಪಾರ ಮಾಡುವ ಮುತ್ತುಮೋನು ಎಂಬವರಿಗೆ ಸೇರಿದ ಗೂಡ್ಸ್ ರಿಕ್ಷಾ ಇದಾಗಿದ್ದು, ರಾತ್ರಿ ವ್ಯಾಪಾರ ಮುಗಿಸಿ ಮನೆಗೆ ತೆರಳುವಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ನಿಟ್ಟಡೆ ಹೆದ್ದಾರಿಯಲ್ಲಿದ್ದ ಸಣ್ಣ ಗುಂಡಿಯೊಂದನ್ನು ತಪ್ಪಿಸಲು ಹೋಗಿ ರಿಕ್ಷಾ ಚಾಲಕ ವಾಹನವನ್ನು ತಪ್ಪು ದಿಕ್ಕಿಗೆ ಚಲಾಯಿಸಿದ್ದೇ ಈ ದುರಂತಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ.
ಇದರ ಜೊತೆಗೆ,ಅಪಘಾತದ ಸಮಯದಲ್ಲಿ ಮಳೆ ಬರುತ್ತಿತ್ತು ಹಾಗೂ ಗೂಡ್ಸ್ ರಿಕ್ಷಾದಲ್ಲಿ ಕೇವಲ ಒಂದು ಹೆಡ್‌ಲೈಟ್ ಮಾತ್ರ ಉರಿಯುತ್ತಿತ್ತು ಎನ್ನಲಾಗಿದೆ. ಇದರಿಂದಾಗಿ ಎದುರಿನಿಂದ ಬರುತ್ತಿದ್ದ ಬೈಕ್ ಸವಾರರಿಗೆ ರಿಕ್ಷಾದ ಅಂದಾಜು ಸಿಗದೆ ಈ ಭೀಕರ ಅಪಘಾತ ನಡೆದಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಕಣ್ಣೀರಿನಲ್ಲಿ ಮುಳುಗಿದ ಕುಟುಂಬ
ಮೃತ ರವೀಂದ್ರ ಮೂಲ್ಯ ಅವರು ತಾಯಿ ಬಾಗಿ, ಪತ್ನಿ ಭವಾನಿ, ಪುತ್ರ ಸ್ವಸ್ತಿಕ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ದಿನವಿಡೀ ದುಡಿದು ಮನೆಗೆ ಮರಳುತ್ತಿದ್ದ ವ್ಯಕ್ತಿ ಶವವಾಗಿ ಮನೆ ಸೇರಿದನ್ನು ಕಂಡು ಇಡೀ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ. ಘಟನಾ ಸ್ಥಳಕ್ಕೆ ವೇಣೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.