ದಕ್ಷಿಣ ಕನ್ನಡ

Vitla : ಒಡಿಯೂರು ಶ್ರೀಗಳ ಜನ್ಮದಿನೋತ್ಸವ ಸಂಭ್ರಮ: ಜುಲೈ 5ಕ್ಕೆ ಕರಾವಳಿಯ ಸಾಂಪ್ರದಾಯಿಕ 'ಕೆಸರ್‌ದ ಕಂಡೊಡೊಂಜಿ ದಿನ' ಕ್ರೀಡಾಕೂಟ

ವಿಟ್ಲ: ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದಲ್ಲಿ ಮುಂಬರುವ ಆಗಸ್ಟ್ 8 ರಂದು ಜರುಗಲಿರುವ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನೋತ್ಸವ, ಗ್ರಾಮೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದ ಅಂಗವಾಗಿ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಜುಲೈ 5ರ ಭಾನುವಾರದಂದು ಬೆಳಿಗ್ಗೆ 9:30 ರಿಂದ ಶ್ರೀ ಸಂಸ್ಥಾನದ ಬನಾರಿಯ ಸಾಗುವಳಿ ಭೂಮಿಯಲ್ಲಿ ಕರಾವಳಿಯ ಗ್ರಾಮೀಣ ಕ್ರೀಡಾ ವೈಭವವನ್ನು ಸಾರುವ ‘ಕೆಸರ್‌ದ ಕಂಡೊಡೊಂಜಿ ದಿನ’ (ಕೆಸರುಗದ್ದೆ ಆಟೋಟಗಳು) ವಿಶಿಷ್ಟ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.

ಗ್ರಾಮೀಣ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಈ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗಾಗಿ ವಿವಿಧ ಮುಕ್ತ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ವಿವರಗಳು ಈ ಕೆಳಗಿನಂತಿವೆ:

ವಿದ್ಯಾರ್ಥಿಗಳಿಗೆ ಜರುಗಲಿರುವ ಸ್ಪರ್ಧೆಗಳು:

5 ರಿಂದ 7 ನೇ ತರಗತಿ ವಿದ್ಯಾರ್ಥಿಗಳಿಗೆ: ಕೆಸರುಗದ್ದೆಯಲ್ಲಿ ನಿಧಿ ಶೋಧನೆ ಸ್ಪರ್ಧೆ (ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ).

8 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ: ಕೆಸರುಗದ್ದೆ ಓಟ, ಅಡಿಕೆ ಹಾಳೆಯಲ್ಲಿ ಎಳೆಯುವ ಸ್ಪರ್ಧೆ, ಮಡಿಕೆ ಒಡೆಯುವುದು, ಮೂರು ಕಾಲಿನ ಓಟ ಹಾಗೂ ಗೋಪುರ ರಚನೆ (12 ಕ್ರೀಡಾಪಟುಗಳ ತಂಡ) ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಸಾರ್ವಜನಿಕರಿಗೆ ಮುಕ್ತ ಅವಕಾಶ:

ಮಹಿಳೆಯರು ಮತ್ತು ಪುರುಷರಿಗೆ (ಪ್ರತ್ಯೇಕ): ಜಿದ್ದಾಜಿದ್ದಿನ ಹಗ್ಗಜಗ್ಗಾಟ (7 ಜನರ ತಂಡ), ಮೂರು ಕಾಲಿನ ಓಟ ಹಾಗೂ ಆಕರ್ಷಕ ಗೋಪುರ ರಚನೆ (12 ಜನರ ತಂಡ) ಸ್ಪರ್ಧೆಗಳು ನಡೆಯಲಿವೆ.

ಮಹಿಳೆಯರಿಗೆ ಮಾತ್ರ: ವಿಶೇಷವಾಗಿ ಮಡಿಕೆ ಒಡೆಯುವ ಸ್ಪರ್ಧೆಯನ್ನು ಇಡಲಾಗಿದೆ.

ಹಿರಿಯ ನಾಗರಿಕರಿಗೂ ಉಂಟು ಅವಕಾಶ:

ಉತ್ಸಾಹಿ ಹಿರಿಯ ನಾಗರಿಕರಿಗಾಗಿ ಕೆಸರುಗದ್ದೆಯಲ್ಲಿ ಓಟದ ಸ್ಪರ್ಧೆ ಹಾಗೂ ಮಡಿಕೆ ಒಡೆಯುವ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಗ್ರಾಮೀಣ ಸೊಗಡನ್ನು ಮರುಸೃಷ್ಟಿಸಲು ಸಂಸ್ಥಾನ ಮುಂದಾಗಿದೆ.

ಈ ವಿಶಿಷ್ಟ ಕೆಸರುಗದ್ದೆ ಕ್ರೀಡೋತ್ಸವದಲ್ಲಿ ಸಾರ್ವಜನಿಕರು ಹಾಗೂ ಕ್ರೀಡಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಪ್ರಕಟಣೆ ತಿಳಿಸಿದೆ





image