ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕಕ್ಕೆನೇಜಿಯಲ್ಲಿ ದಿನಸಿ ಅಂಗಡಿಯೊಂದಕ್ಕೆ ಭಾರಿ ಗಾತ್ರದ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿ, ಸ್ಥಳೀಯರಲ್ಲಿ ಆತಂಕ ಮೂಡಿಸಿದ ಘಟನೆ ಬುಧವಾರ (ಆಗಸ್ಟ್ 19) ಮಧ್ಯಾಹ್ನ ನಡೆದಿದೆ.
ಸ್ಥಳೀಯ ಉದ್ಯಮಿ ವಾಸುದೇವ ರಾವ್ ಅವರಿಗೆ ಸೇರಿದ ದಿನಸಿ ಅಂಗಡಿಯೊಳಗೆ ದಿಢೀರನೆ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪವೊಂದು ತೂರಿಕೊಂಡಿತ್ತು. ಅಂಗಡಿಯಲ್ಲಿದ್ದ ಗ್ರಾಹಕರು ಹಾಗೂ ಮಾಲೀಕರು ತಕ್ಷಣ ಹೊರಗೆ ಓಡಿಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಕ್ಷಣವೇ ಲಾಯಿಲದ ಪ್ರಸಿದ್ಧ ಉರಗ ಪ್ರೇಮಿ ಸ್ನೇಕ್ ಅಶೋಕ್ ಅವರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಧಾವಿಸಿದ ಅಶೋಕ್ ಅವರು, ಅತ್ಯಂತ ಜಾಗರೂಕತೆಯಿಂದ ಕಾಳಿಂಗ ಸರ್ಪವನ್ನು ರಕ್ಷಿಸಿ, ಬಳಿಕ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಸಮೀಪದ ದಟ್ಟ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.
ಈ ರೋಚಕ ಕಾರ್ಯಾಚರಣೆಯ ದೃಶ್ಯಗಳನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಉರಗ ಪ್ರೇಮಿಯ ಸಮಯಪ್ರಜ್ಞೆ ಮತ್ತು ಸಾಹಸಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
