ಉಡುಪಿ

ಉಡುಪಿ : ಡೇವಿಡ್ ಡಿಸೋಜ ಶೂಟೌಟ್ ಕೇಸ್: ಪ್ರಮುಖ ಆರೋಪಿಗಳಿಗೆ 10 ದಿನ ಪೊಲೀಸ್ ಕಸ್ಟಡಿ

 


ಉಡುಪಿ: ಮುದರಂಗಡಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ಡೇವಿಡ್ ಡಿಸೋಜ ಅವರ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧಿತ ಇಬ್ಬರು ಪ್ರಮುಖ ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಉಡುಪಿ ನ್ಯಾಯಾಲಯವು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.

​ಕೋರ್ಟ್ ಕಸ್ಟಡಿಗೆ ಪಡೆದ ಆರೋಪಿಗಳನ್ನು ಉತ್ತರಾಖಂಡ್ ಮೂಲದ ಆಕಾಶ್ ಅಲಿಯಾಸ್ ಅನ್ಮೋಲ್ ರಸ್ತಗಿ ಮತ್ತು ಬಿಹಾರ ಮೂಲದ ಜಿಯಾವುಲ್ಲಾ ಅಲಿಯಾಸ್ ದೀಪಕ್ ಎಂದು ಗುರುತಿಸಲಾಗಿದೆ. ಈ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದರು.

ಪೊಲೀಸ್ ಕಸ್ಟಡಿಗೆ ಕೋರಿದ್ದೇಕೆ?

ಪ್ರಕರಣದ ತನಿಖಾಧಿಕಾರಿ, ಕಾಪು ವೃತ್ತ ನಿರೀಕ್ಷಕ ಅಝ್ಮತ್ ಅಲಿ ನೇತೃತ್ವದ ತನಿಖಾ ತಂಡವು ಸೋಮವಾರ ಆರೋಪಿಗಳನ್ನು ಉಡುಪಿಯ ನ್ಯಾಯಾಧೀಶ ಪುರುಷೋತ್ತಮ ಅವರ ಪೀಠದ ಮುಂದೆ ಹಾಜರುಪಡಿಸಿತು. ಕೃತ್ಯದ ಹಿಂದಿರುವ ಸಂಪೂರ್ಣ ಜಾಲವನ್ನು ಭೇದಿಸಲು ಹಾಗೂ ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ವಶಕ್ಕೆ ನೀಡುವಂತೆ ಪೊಲೀಸರು ಮನವಿ ಸಲ್ಲಿಸಿದ್ದರು.

​ಪೊಲೀಸ್ ಇಲಾಖೆಯ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶರು, ಆರೋಪಿಗಳನ್ನು 10 ದಿನಗಳ ಕಾಲ ತನಿಖಾಧಿಕಾರಿಗಳ ವಶಕ್ಕೆ ನೀಡಿ ಆದೇಶ ಹೊರಡಿಸಿದರು.

ತೀವ್ರ ವಿಚಾರಣೆ ಸಾಧ್ಯತೆ:

ಕಸ್ಟಡಿ ಅವಧಿಯಲ್ಲಿ ಘಟನೆಯ ಹಿಂದಿರುವ ಅಂತರರಾಜ್ಯ ಗ್ಯಾಂಗ್‌ಸ್ಟರ್‌ಗಳ ಪಾತ್ರ, ಕೃತ್ಯಕ್ಕೆ ಪ್ರೇರಣೆ ನೀಡಿದವರು, ಸ್ಥಳೀಯವಾಗಿ ನೆರವಾದ ವ್ಯಕ್ತಿಗಳು ಮತ್ತು ಗುಂಡಿನ ದಾಳಿಗೆ ಬಳಸಿದ ಮಾರಕ ಆಯುಧಗಳು ಎಲ್ಲಿಂದ ಪೂರೈಕೆಯಾಗಿದ್ದವು ಎಂಬುದರ ಕುರಿತು ತನಿಖಾ ತಂಡವು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಿದೆ.



image