ವಿದೇಶ

117ನೇ ವಸಂತಕ್ಕೆ ಕಾಲಿಟ್ಟ ವಿಶ್ವದ ಅತ್ಯಂತ ಹಿರಿಯಜ್ಜಿ ಎಥೆಲ್ ಕ್ಯಾಟರ್‌ಹ್ಯಾಮ್: ಇತಿಹಾಸದ ಅಪರೂಪದ ಕೊಂಡಿ



ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬ್ರಿಟನ್‌ನ ಎಥೆಲ್ ಕ್ಯಾಟರ್‌ಹ್ಯಾಮ್ ಅವರು ತಮ್ಮ 117ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಸರ್ರೆಯಲ್ಲಿ ನಡೆದ ಈ ಸಂಭ್ರಮದ ಕ್ಷಣದಲ್ಲಿ ಅವರ ಕುಟುಂಬಸ್ಥರು ಹಾಗೂ ಆಪ್ತರು ಭಾಗಿಯಾಗಿದ್ದರು. 2025ರ ಏಪ್ರಿಲ್‌ನಲ್ಲಿ ಬ್ರೆಜಿಲ್‌ನ ಸನ್ಯಾಸಿನಿ ಇನಾ ಕೆನಬಾರೊ ಲೂಕಾಸ್ (116 ವರ್ಷ) ಅವರು ವಿಧಿವಶರಾದ ಬಳಿಕ, ಎಥೆಲ್ ಜಗತ್ತಿನ ಜೀವಂತ ಹಿರಿಯ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

​ಶತಮಾನದ ಇತಿಹಾಸಕ್ಕೆ ಜೀವಂತ ಸಾಕ್ಷಿ

1909ರಲ್ಲಿ ರಾಜ ಏಳನೇ ಎಡ್ವರ್ಡ್ ಆಡಳಿತಾವಧಿಯಲ್ಲಿ ಜನಿಸಿದ ಎಥೆಲ್, ವಿಶ್ವದ ಪ್ರಮುಖ ಐತಿಹಾಸಿಕ ಘಟನೆಗಳನ್ನು ಕಣ್ಣಾರೆ ಕಂಡವರು. ಕುಖ್ಯಾತ ಟೈಟಾನಿಕ್ ನೌಕೆ ದುರಂತ ಸಂಭವಿಸುವುದಕ್ಕಿಂತ ಮೂರು ವರ್ಷಗಳ ಮುನ್ನವೇ ಜನಿಸಿದ್ದ ಇವರು, ರಷ್ಯನ್ ಕ್ರಾಂತಿ ಹಾಗೂ ಎರಡೂ ಮಹಾಯುದ್ಧಗಳ ಕಾಲಘಟ್ಟವನ್ನು ದಾಟಿ ಬಂದಿದ್ದಾರೆ.

​ಕೊರೊನಾ ಗೆದ್ದು ಬಂದ ಸಾಹಸಿ

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮಾಹಿತಿಯಂತೆ, 2020ರಲ್ಲಿ ತಮ್ಮ 110ನೇ ವಯಸ್ಸಿನಲ್ಲಿ ಎಥೆಲ್ ಅವರಿಗೆ ಕೋವಿಡ್-19 ಸೋಂಕು ತಗಲಿತ್ತು. ಆದರೆ, ತಮ್ಮ ದೃಢ ಮನೋಬಲದಿಂದ ಸೋಂಕನ್ನು ಯಶಸ್ವಿಯಾಗಿ ಗೆದ್ದು ಬರುವ ಮೂಲಕ ಅತ್ಯಂತ ಹಿರಿಯ ವಯಸ್ಸಿನಲ್ಲಿ ಕೊರೊನಾ ಜಯಿಸಿದ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

​ಭಾರತಕ್ಕೂ ಇತ್ತು ಹಳೆಯ ನಂಟು

ಹ್ಯಾಂಪ್‌ಶೈರ್‌ನ ಶಿಪ್ಪನ್‌ ಬೆಲ್ಲಿಂಗರ್‌ನಲ್ಲಿ ಹುಟ್ಟಿದ ಎಥೆಲ್, 1927ರಲ್ಲಿ ಭಾರತದಲ್ಲಿದ್ದ ಬ್ರಿಟಿಷ್ ಮಿಲಿಟರಿ ಕುಟುಂಬವೊಂದರಲ್ಲಿ ಮಗುವಿನ ಆರೈಕೆ ಮಾಡುವ ಸಹಾಯಕಿ (ನಾನಿ) ಯಾಗಿ ಸೇವೆ ಸಲ್ಲಿಸಿದ್ದರು. ನಂತರ ಬ್ರಿಟಿಷ್ ಸೇನಾಧಿಕಾರಿ ನಾರ್ಮನ್ ಅವರನ್ನು ವಿವಾಹವಾದ ಇವರು, ಹಾಂಕಾಂಗ್‌ನಲ್ಲಿ ನರ್ಸರಿ ಶಾಲೆಯನ್ನು ಸಹ ನಡೆಸುತ್ತಿದ್ದರು.

​




ದೀರ್ಘಾಯುಷ್ಯದ ಕುಟುಂಬ ಹಿನ್ನೆಲೆ

ದೀರ್ಘಾಯುಷ್ಯ ಎನ್ನುವುದು ಇವರ ಕುಟುಂಬದ ವೈಶಿಷ್ಟ್ಯ. ಎಥೆಲ್ ಅವರ ಸಹೋದರಿ ಗ್ಲಾಡಿಸ್ ಬಾಬಿಲಾಸ್ ಕೂಡ 104 ವರ್ಷಗಳ ಸುದೀರ್ಘ ಜೀವನ ನಡೆಸಿದ್ದರು ಎಂದು ವರದಿಯಾಗಿದೆ.

​ಪ್ರಸ್ತುತ ಎಥೆಲ್ ವಿಶ್ವದ ಅತ್ಯಂತ ಹಿರಿಯ ಜೀವಂತ ವ್ಯಕ್ತಿಯಾಗಿದ್ದರೂ, ಇತಿಹಾಸದಲ್ಲೇ ಅತಿ ಹೆಚ್ಚು ಕಾಲ ಬದುಕಿದ ದಾಖಲೆ ಫ್ರಾನ್ಸ್‌ನ ಜೀನ್ ಕಾಲ್ಮೆಂಟ್ (122 ವರ್ಷ, 1997ರಲ್ಲಿ ನಿಧನ) ಅವರ ಹೆಸರಲ್ಲಿದೆ.



image