ದಕ್ಷಿಣ ಕನ್ನಡ

ಮಂಗಳೂರು : ಶೇರ್ ಮಾರ್ಕೆಟ್ ಲಾಭದ ಆಸೆಗೆ ಬಿದ್ದು 12.87 ಲಕ್ಷ ರೂ. ಕಳೆದುಕೊಂಡ ಮಂಗಳೂರಿನ ವ್ಯಕ್ತಿ: ಸೈಬರ್ ಕ್ರೈಮ್ ದೂರು ದಾಖಲು

 


ಮಂಗಳೂರು: ಶೇರ್ ಟ್ರೇಡಿಂಗ್‌ನಲ್ಲಿ ಅತ್ಯಲ್ಪ ಅವಧಿಯಲ್ಲಿ ದುಪ್ಪಟ್ಟು ಲಾಭ ಗಳಿಸಿಕೊಡುವುದಾಗಿ ನಂಬಿಸಿ ಮಂಗಳೂರಿನ 44 ವರ್ಷದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 12,87,108 ರೂಪಾಯಿ ಆನ್‌ಲೈನ್ ವಂಚನೆ ಎಸಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

​ವಾಟ್ಸ್‌ಆ್ಯಪ್ ಗ್ರೂಪ್ ಹಾಗೂ ನಕಲಿ ಆ್ಯಪ್ ಬಳಸಿ ವಂಚಕರು ಈ ಕೃತ್ಯ ಎಸಗಿದ್ದಾರೆ.

​ವಂಚನೆ ನಡೆದದ್ದು ಹೇಗೆ?

​ಕಳೆದ ಜೂನ್ 13 ರಂದು ಸಂತ್ರಸ್ತ ವ್ಯಕ್ತಿಯನ್ನು ‘Julius Baer Group Ltd’ ಕಂಪನಿಯ ಹೆಸರಿನಲ್ಲಿದ್ದ ‘B1062 Prime Leaders’ ಎಂಬ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಲಾಗಿತ್ತು. ಗ್ರೂಪ್‌ನಲ್ಲಿದ್ದ ಅಪರಿಚಿತ ವ್ಯಕ್ತಿಗಳು ಶೇರ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಸಿಗಲಿದೆ ಎಂದು ನಿರಂತರವಾಗಿ ಜಾಗೃತಿ ತರಹದ ಸಂದೇಶಗಳನ್ನು ಕಳುಹಿಸುತ್ತಿದ್ದರು.

​ಬಳಿಕ 'ಸೋನಲ್ ಜಗನ್ನಾಥ್' ಹಾಗೂ ಇತರ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ, ‘JB X One’ ಎಂಬ ಟ್ರೇಡಿಂಗ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಉದ್ರೇಕಿಸಿ ಹೂಡಿಕೆಗೆ ಆಮಿಷ ಒಡ್ಡಿದ್ದರು.

​ಆರಂಭದಲ್ಲಿ ಲಾಭ ನೀಡಿ ನಂಬಿಕೆ ಗಳಿಸಿದ ವಂಚಕರು

​ವಂಚಕರ ಮಾತು ನಂಬಿದ ಸಂತ್ರಸ್ತರು ಜುಲೈ 14 ರಂದು ಪ್ರಾಯೋಗಿಕವಾಗಿ 5,000 ರೂಪಾಯಿಯನ್ನು ಯುಪಿಐ (UPI) ಮೂಲಕ ಪಾವತಿಸಿದ್ದರು. ತಕ್ಷಣವೇ ವಂಚಕರು ಲಾಭದ ಸಮೇತ 5,250 ರೂಪಾಯಿಯನ್ನು ಅವರ ಖಾತೆಗೆ ವಾಪಸ್ ಜಮಾ ಮಾಡಿ ಸಂಪೂರ್ಣ ನಂಬಿಕೆ ಗಿಟ್ಟಿಸಿಕೊಂಡಿದ್ದರು.

​ಇದರಿಂದ ಆಕರ್ಷಿತರಾದ ವ್ಯಕ್ತಿ, ಜುಲೈ 14 ರಿಂದ ಆಗಸ್ಟ್ 03 ರ ನಡುವೆ NEFT ಮತ್ತು RTGS ಮೂಲಕ ಹಂತ ಹಂತವಾಗಿ ಒಟ್ಟು 12.87 ಲಕ್ಷಕ್ಕೂ ಅಧಿಕ ಹಣವನ್ನು ಅಪರಿಚಿತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು.

​ಹಣ ಹಿಂಪಡೆಯಲು ಹೋದಾಗ ಬಯಲಾಯ್ತು ಸತ್ಯ

​ಹೂಡಿಕೆ ಮಾಡಿದ ಮೊತ್ತ ಹಾಗೂ ಅದಕ್ಕೆ ಬಂದ ಲಾಭವನ್ನು ಹಿಂಪಡೆಯಲು (Withdrawal) ಯತ್ನಿಸಿದಾಗ, ವಂಚಕರು ತೆರಿಗೆ ಮತ್ತು ಪ್ರೊಸೆಸಿಂಗ್ ಶುಲ್ಕದ ನೆಪವೊಡ್ಡಿ ಇನ್ನು ಹೆಚ್ಚಿನ ಹಣ ಪಾವತಿಸುವಂತೆ ಒತ್ತಾಯಿಸಿದ್ದಾರೆ. ಹಣ ಡ್ರಾ ಮಾಡಲು ಸಾಧ್ಯವಾಗದೇ ಇದ್ದಾಗ ತಾವು ಸೈಬರ್ ವಂಚನೆಗೆ ಒಳಗಾಗಿರುವುದು ವ್ಯಕ್ತಿಗೆ ಸ್ಪಷ್ಟವಾಗಿದೆ.

​ಈ ಬಗ್ಗೆ ಮಂಗಳೂರಿನ ಸೈಬರ್ ಕ್ರೈಮ್ (CEN) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.



image