ಕ್ರೈಂ

ಕೇರಳ​ : ಫೋನ್ ನೀಡದ್ದಕ್ಕೆ ಆಕ್ರೋಶ: ಪ್ರಿಯಕರ, ಸ್ನೇಹಿತರೊಂದಿಗೆ ಸೇರಿ ಅಜ್ಜನನ್ನೇ ಕೊಲೆಗೈದ 13ರ ಮೊಮ್ಮಗಳು!

 


ಆಲಪ್ಪುಳ: ಮೊಬೈಲ್ ಬಳಕೆ ಮತ್ತು ತಡವಾಗಿ ಮನೆಗೆ ಬರುವುದಕ್ಕೆ ಅಜ್ಜ ಗದರಿದ್ದನ್ನೇ ವೈಯಕ್ತಿಕ ದ್ವೇಷವಾಗಿಟ್ಟುಕೊಂಡ 13 ವರ್ಷದ ಬಾಲಕಿಯೊಬ್ಬಳು, ತನ್ನ ಪ್ರಿಯಕರ ಹಾಗೂ ಆತನ ಸ್ನೇಹಿತರೊಂದಿಗೆ ಸೇರಿ ಸ್ವಂತ ಅಜ್ಜನನ್ನೇ ಅತ್ಯಂತ ಭೀಕರವಾಗಿ ಹತ್ಯೆ ಮಾಡಿಸಿರುವ ಆಘಾತಕಾರಿ ಘಟನೆ ಕೇರಳದ ಆಲಪ್ಪುಳ ಜಿಲ್ಲೆಯ ಕರುವತ್ತದಲ್ಲಿ ಬೆಳಕಿಗೆ ಬಂದಿದೆ.

​ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಮೊಮ್ಮಗಳು ಸೇರಿದಂತೆ ನಾಲ್ವರು ಹದಿಹರೆಯದ ಯುವಕರನ್ನು ಪೊಲೀಸರು ಸದ್ಯ ಬಂಧಿಸಿದ್ದಾರೆ. ಘಟನೆಯಲ್ಲಿ ಕರುವತ್ತದ ಬಾಡಿಗೆ ಮನೆಯಲ್ಲಿ ವಾಸವಿದ್ದ ಶಿವನ್‌ಕುಟ್ಟಿ ಚೆಟ್ಟಿಯಾರ್ (65) ಕೊಲೆಯಾದ ದುರ್ದೈವಿಯಾಗಿದ್ದಾರೆ.

​ಹತ್ಯೆಗೆ ಸ್ಕೇಚ್ ಹಾಕಿದ್ದು ಹೇಗೆ?

​ಬಾಲಕಿಯ ತಾಯಿ ಎರಡನೇ ಮಗುವಿನ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಮನೆಯಲ್ಲಿ ಅಜ್ಜ ಒಬ್ಬಂಟಿಯಾಗಿರುವುದನ್ನು ಗಮನಿಸಿದ ಬಾಲಕಿ, ತನ್ನ ಪ್ರಿಯಕರನಿಗೆ ಕರೆ ಮಾಡಿ ಹತ್ಯೆಯ ಮಾಸ್ಟರ್ ಪ್ಲಾನ್ ರೂಪಿಸಿದ್ದಳು. ಮನೆಗೆ ಕಳ್ಳರು ನುಗ್ಗಿ ಕೊಲೆ ಮಾಡಿದ್ದಾರೆ ಎಂದು ಬಿಂಬಿಸಲು ಯೋಜಿಸಲಾಗಿತ್ತು. ಇದಕ್ಕಾಗಿ ವೀಡಿಯೊ ಕಾಲ್ ಮೂಲಕ ಪ್ರಿಯಕರ ಹಾಗೂ ಆತನ ಗ್ಯಾಂಗ್‌ಗೆ ಮನೆಯ ಪ್ರವೇಶದ್ವಾರ, ಬಾಗಿಲಿನ ಲಾಕ್ ಹಾಗೂ ಅಜ್ಜನ ಚಲನವಲನದ ಪ್ರತಿಯೊಂದು ವಿವರವನ್ನೂ ಬಾಲಕಿ ಲೈವ್ ಆಗಿ ತಲುಪಿಸಿದ್ದಳು.

​ಭಾನುವಾರ ರಾತ್ರಿ ನಡೆದಿದ್ದೇನು?

​ಭಾನುವಾರ ತಡರಾತ್ರಿ ವೆಂಟಿಲೇಟರ್ ಮೂಲಕ ಮನೆಗೆ ನುಗ್ಗಿದ ಹದಿಹರೆಯದ ಯುವಕರ ತಂಡ, ನಿದ್ದೆಯಿಂದ ಎಚ್ಚರಗೊಂಡ ಅಜ್ಜನ ಮೇಲೆ ಏಕಾಏಕಿ ಹಲ್ಲೆ ನಡೆಸಿದೆ. ಬಳಿಕ ಆತನ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಕೃತ್ಯ ಎಸಗಿದ ನಂತರ ಕಳ್ಳತನದ ನಾಟಕವಾಡಲು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು.

​ಪೊಲೀಸರ ಅನುಮಾನಕ್ಕೆ ಕಾರಣವಾದ ಅಂಶಗಳು:

​ಘಟನಾ ಸ್ಥಳಕ್ಕೆ ಆಗಮಿಸಿದ ಆಲಪ್ಪುಳ ಪೊಲೀಸರಿಗೆ ಹಲವು ಅನುಮಾನಗಳು ವ್ಯಕ್ತವಾದವು:

  1. ​ಕಳ್ಳರು ಹೊರಗಿನಿಂದ ಯಾವುದೇ ಮಾರಕ ಆಯುಧ ಅಥವಾ ಹಗ್ಗ ತಂದಿರಲಿಲ್ಲ; ಬದಲಾಗಿ ಮನೆಯಲ್ಲಿದ್ದ ಲುಂಗಿ ಮತ್ತು ಬಟ್ಟೆಗಳನ್ನೇ ಹತ್ಯೆಗೆ ಬಳಸಲಾಗಿತ್ತು.
  2. ​ಇಡೀ ಮನೆಯ ರೂಮ್‌ಗಳು ಅಸ್ತವ್ಯಸ್ತಗೊಂಡಿದ್ದರೆ, ಬಾಲಕಿಯ ಕೊಠಡಿ ಮಾತ್ರ ಯಾವುದೇ ಹಾನಿಯಾಗದೆ ಸುಸ್ಥಿತಿಯಲ್ಲಿತ್ತು.
  3. ​ವಿಚಾರಣೆ ವೇಳೆ ಬಾಲಕಿ ನೀಡಿದ ಪರಸ್ಪರ ವಿರೋಧಾತ್ಮಕ ಹೇಳಿಕೆಗಳು ಸಂಶಯವನ್ನು ಹೆಚ್ಚಿಸಿದವು.

​

ಕಾಲ್ ಹಿಸ್ಟರಿಯಿಂದ ಬಯಲಾಯ್ತು ಅಸಲಿ ಕಥೆ:

​ಬಾಲಕಿಯ ಮೊಬೈಲ್ ಫೋನ್‌ನ ಕರೆಗಳ ವಿವರ (Call History) ಪರಿಶೀಲಿಸಿದಾಗ ಈ ಭೀಕರ ಹತ್ಯೆಯ ಅಸಲಿ ಕಹಾನಿ ಬಯಲಾಗಿದೆ.

​ಈ ಕುರಿತು ಪ್ರತಿಕ್ರಿಯಿಸಿದ ಆಲಪ್ಪುಳ ಜಿಲ್ಲಾ ಪೊಲೀಸ್ ಮುಖ್ಯಸ್ಥ ವಿಷ್ಣು ಪ್ರತೀಪ್ ಟಿಕೆ, "ಅಜ್ಜನನ್ನು ಕೊಲ್ಲಲೇಬೇಕು ಎಂಬ ಸ್ಪಷ್ಟ ಸಂದೇಶವನ್ನು ಬಾಲಕಿ ತನ್ನ ಪ್ರಿಯಕರನಿಗೆ ನೀಡಿದ್ದಳು. ಅಜ್ಜನ ಹತ್ಯೆಯ ನಂತರ ದೋಚಿದ ಹಣದಿಂದ ಸ್ನೇಹಿತನ ಮದುವೆಗೆ ದುಬಾರಿ ಉಡುಗೊರೆ ನೀಡಲು ಹಾಗೂ ತಮ್ಮ ವೈಯಕ್ತಿಕ ವೆಚ್ಚಗಳಿಗೆ ಬಳಸಿಕೊಳ್ಳಲು ಈ ಹದಿಹರೆಯದ ಗ್ಯಾಂಗ್ ಯೋಜಿಸಿತ್ತು" ಎಂದು ತಿಳಿಸಿದ್ದಾರೆ.



image