ದೇಶ

ಪ್ರಧಾನಿ ಮೋದಿ ವಿರುದ್ಧ ಅಸಭ್ಯ ಹೇಳಿಕೆ: ಕ್ಷಮೆಯಾಚಿಸಿದ 15 ವರ್ಷದ ಯುವತಿ, ವಿಡಿಯೋ ವೈರಲ್!

 


ನ್ಯೂಸ್ 2 ಡೇ ಕನ್ನಡ ಡಿಜಿಟಲ್ ಡೆಸ್ಕ್:

​ನೀಟ್ (NEET) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ನವದೆಹಲಿಯಲ್ಲಿ ನಡೆದಿದ್ದ ವಿದ್ಯಾರ್ಥಿ ಪ್ರತಿಭಟನೆ ವೇಳೆ, ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಅಸಭ್ಯ ಶಬ್ದಗಳಿಂದ ನಿಂದಿಸಿದ್ದ ಯುವತಿಯೊಬ್ಬಳು ಇದೀಗ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾಳೆ. ಕೈಮುಗಿದು ಪಶ್ಚಾತ್ತಾಪ ವ್ಯಕ್ತಪಡಿಸಿರುವ ಆಕೆಯ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

​ಕೆಲವರ ಕುಮ್ಮಕ್ಕಿಗೆ ಒಳಗಾಗಿ ತಾನು ಆ ಸಮಯದಲ್ಲಿ ಆ ರೀತಿ ಮಾತನಾಡಿದ್ದಾಗಿ ಒಪ್ಪಿಕೊಂಡಿರುವ ಯುವತಿ, "ನನ್ನ ವಯಸ್ಸು ಕೇವಲ 15 ವರ್ಷ. ನಾನು ಮಾಡಿದ್ದು ಕ್ಷಮಿಸಲಾರದ ದೊಡ್ಡ ತಪ್ಪು. ಸದ್ಯಕ್ಕೆ ನನಗೆ ನನ್ನ ಮುಖವನ್ನೇ ಕನ್ನಡಿ ಮುಂದೆ ನೋಡಿಕೊಳ್ಳಲು ನಾಚಿಕೆಯಾಗುತ್ತಿದೆ. ಇದು ನನ್ನ ಮೊದಲ ಹಾಗೂ ಕೊನೆಯ ತಪ್ಪಾಗಿದ್ದು, ದಯವಿಟ್ಟು ದೇಶದ ಜನತೆ ನನ್ನನ್ನು ಕ್ಷಮಿಸಬೇಕು" ಎಂದು ಮನವಿ ಮಾಡಿದ್ದಾಳೆ.

​ಪೊಲೀಸರ ಎಫ್‌ಐಆರ್ ಮತ್ತು ವಯಸ್ಸಿನ ಗೊಂದಲ!

​ಪ್ರಧಾನಿಯವರ ಘನತೆಗೆ ಧಕ್ಕೆ ತಂದ ಹಾಗೂ ಸಾರ್ವಜನಿಕ ವಲಯದಲ್ಲಿ ಶಾಂತಿ ಭಂಗಕ್ಕೆ ಯತ್ನಿಸಿದ ಆರೋಪದಡಿ, ಆರಂಭದಲ್ಲಿ ನೋಯ್ಡಾ ಪೊಲೀಸ್ ಠಾಣೆಯಲ್ಲಿ ಈಕೆಯ ವಿರುದ್ಧ ಜೀರೋ ಎಫ್‌ಐಆರ್ (Zero FIR) ದಾಖಲಾಗಿತ್ತು. ತದನಂತರ ಈ ಪ್ರಕರಣವನ್ನು ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು.

​ಪೊಲೀಸ್ ದಾಖಲೆಗಳಲ್ಲಿ ಆಕೆಯ ವಯಸ್ಸು 25 ವರ್ಷ ಎಂದು ನಮೂದಿಸಲಾಗಿತ್ತು. ಆದರೆ, ಈಗ ವೈರಲ್ ಆಗಿರುವ ವಿಡಿಯೋದಲ್ಲಿ ತನಗೆ ಕೇವಲ 15 ವರ್ಷ ಎಂದು ಯುವತಿ ಹೇಳಿಕೊಂಡಿರುವುದು ವಯಸ್ಸಿನ ಕುರಿತು ಗೊಂದಲ ಮೂಡಿಸಿದೆ.

​ಪ್ರಧಾನಿ ಮೋದಿ ಅವರ ಸಂದೇಶದ ಬೆನ್ನಲ್ಲೇ ಕ್ಷಮಾಪಣೆ!

​ಈ ಕ್ಷಮಾಪಣೆಯ ವಿಡಿಯೋ ಹೊರಬರುವುದಕ್ಕೂ ಕೆಲವೇ ಗಂಟೆಗಳ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಜಂತರ್ ಮಂತರ್ ಘಟನೆಯನ್ನು ಉಲ್ಲೇಖಿಸಿ ಸುದೀರ್ಘ ವೀಡಿಯೋ ಹಂಚಿಕೊಂಡಿದ್ದರು.

​ವಿಡಿಯೋದಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?

"ದಾರಿ ತಪ್ಪಿದ ಯುವಜನತೆಗೆ ಶಿಕ್ಷೆ ನೀಡುವ ಬದಲು ಅವರನ್ನು ಸರಿದಾರಿಗೆ ತರುವುದು ನಮ್ಮ ಮುಖ್ಯ ಕರ್ತವ್ಯ. ಸಣ್ಣ ವಯಸ್ಸಿನಲ್ಲಿ ತಪ್ಪುಗಳು ಆಗುವುದು ಸಹಜ, ಅದೇ ವಯಸ್ಸಿನಲ್ಲಿ ತಿದ್ದಿಕೊಳ್ಳಲು ಅವಕಾಶಗಳೂ ಇರುತ್ತವೆ. ಯಾರನ್ನೋ ಕೋರ್ಟ್‌ಗೆ ಅಲೆದಾಡಿಸುವುದರಿಂದ ಅಥವಾ ಕಿರುಕುಳ ನೀಡುವುದರಿಂದ ಪರಿಹಾರ ಸಿಗುವುದಿಲ್ಲ. ನಾನು ಅವರನ್ನು ಮನಸ್ಸಿನಿಂದ ಕ್ಷಮಿಸುತ್ತೇನೆ, ಸಮಾಜವೂ ಅವರನ್ನು ಕ್ಷಮಿಸಿ ನವ ಜೀವನಕ್ಕೆ ದಾರಿ ಮಾಡಿಕೊಡಬೇಕು."


​ಪ್ರಧಾನಿಯವರು ಈ ರೀತಿ ಯುವಜನತೆಯ ಪರವಾಗಿ ಅನುಕಂಪದ ಮಾತುಗಳನ್ನಾಡಿದ ತಕ್ಷಣವೇ ಈ ಯುವತಿಯ ಕ್ಷಮಾಪಣೆಯ ವಿಡಿಯೋ ಬಹಿರಂಗಗೊಂಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.



image