ಮಂಗಳೂರು: ಸುಳ್ಳು ಹೆಸರು ಹಾಗೂ ನಕಲಿ ವಿಳಾಸ ನೀಡಿ ಕಳೆದ 15 ವರ್ಷಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ ಎಲ್‌ಪಿಸಿ (LPC) ವಾರೆಂಟ್ ಆರೋಪಿತೆಯನ್ನು ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬಂಧಿತ ಮಹಿಳೆಯನ್ನು ಮೂಡಬಿದರೆ ತಾಲೂಕಿನ ಪುತ್ತಿಗೆ ಗ್ರಾಮದ ಬಡಗಮಿಜಾರು ನಿವಾಸಿ ಸೆಫಿಯಾ (53) ಎಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನೆಲೆ:
2011ರಲ್ಲಿ ಮಂಗಳೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ‘ಅನೈತಿಕ ಮಾನವ ಸಾಗಣೆ ತಡೆ ಕಾಯ್ದೆ’ (ITP Act) ಅಡಿಯಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಈ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಈ ಮಹಿಳೆ, ತನ್ನ ಹೆಸರು ‘ಆಯಿಷಾ’ (36) ಹಾಗೂ ಪತಿ ಗುರುಪುರ ಬಂಗ್ಲಗುಡ್ಡೆ ನಿವಾಸಿ ಹಸನಬ್ಬ ಎಂದು ಸುಳ್ಳು ಮಾಹಿತಿ ನೀಡಿ ಜಾಮೀನು ಪಡೆದು ತಲೆಮರೆಸಿಕೊಂಡಿದ್ದಳು.
ಈ ಕುರಿತು ಮಂಗಳೂರಿನ 3ನೇ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಆರೋಪಿ ಸುದೀರ್ಘ ಕಾಲದಿಂದ ಗೈರುಹಾಜರಾಗಿದ್ದ ಕಾರಣ ಪ್ರಕರಣವು ಎಲ್‌ಪಿಸಿ (LPC No. 10/2019) ವಾರೆಂಟ್ ಹಂತದಲ್ಲೇ ಬಾಕಿ ಉಳಿದಿತ್ತು.
ಬೆರಳಚ್ಚು (Fingerprint) ತಂತ್ರಜ್ಞಾನದಿಂದ ಬಯಲಾಯ್ತು ಅಸಲಿ ರೂಪ!
ಸುಳ್ಳು ವಿಳಾಸ ನೀಡಿದ್ದರಿಂದ ಆರೋಪಿಯ ಪತ್ತೆ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಆದರೆ ಮಂಗಳೂರು ಬೆರಳಚ್ಚು ಘಟಕದ ತಜ್ಞರು 2011ರ ಪ್ರಕರಣದ ಕಡತದಲ್ಲಿದ್ದ ಬೆರಳಚ್ಚನ್ನು ತನಿಖೆಗೆ ಒಳಪಡಿಸಿದಾಗ, 'ಆಯಿಷಾ' ಎಂಬ ಹೆಸರಿನಲ್ಲಿದ್ದ ಮಹಿಳೆಯ ಅಸಲಿ ಹೆಸರು ಸೆಫಿಯಾ (53), ಪತಿ ದಿವಂಗತ ಅಬೂಬುಕ್ಕರ್ ಎಂಬುದು ಸಾಕ್ಷ್ಯಾಧಾರ ಸಮೇತ ಖಚಿತವಾಯಿತು.
ನ್ಯಾಯಾಂಗ ಬಂಧನ:
ತಜ್ಞರ ವರದಿ ಆಧಾರದ ಮೇಲೆ ಚುರುಕಿನ ಕಾರ್ಯಾಚರಣೆ ನಡೆಸಿದ ಮಹಿಳಾ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಆಗಸ್ಟ್ 18ರಂದು ಆರೋಪಿ ಸೆಫಿಯಾಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
