ಕ್ರೈಂ

ಬೆಳ್ತಂಗಡಿ : 16ರ ಬಾಲಕಿ ಮೇಲೆ ಅತ್ಯಾಚಾರ – ಆಂಧ್ರ ಮೂಲದ ಆರೋಪಿ ಶ್ರೀಕಾಂತ್‌ ಧರ್ಮಸ್ಥಳ ಪೊಲೀಸರ ವಶಕ್ಕೆ



ಧರ್ಮಸ್ಥಳ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯಾಗಿಸಿದ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿದ್ದ ಆರೋಪಿಯನ್ನು ಧರ್ಮಸ್ಥಳ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ, ಪ್ರಸ್ತುತ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಶ್ರೀಕಾಂತ್‌ (21) ಬಂಧಿತ ಆರೋಪಿ.

​ಪ್ರಕರಣದ ಹಿನ್ನೆಲೆ:

ಧರ್ಮಸ್ಥಳ ಪೊಲೀಸ್‌ ಠಾಣಾ ವ್ಯಾಪ್ತಿಯ 16 ವರ್ಷದ ಬಾಲಕಿಯೊಂದಿಗೆ ಆರೋಪಿ ಶ್ರೀಕಾಂತ್‌ ಕಳೆದ ವರ್ಷದ ಸೆಪ್ಟೆಂಬರ್‌ ಹಾಗೂ ನವೆಂಬರ್‌ ಅವಧಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಅಲ್ಲದೆ, ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಅಪಾಯ ಕಾಯ್ದಿದೆ ಎಂದು ಬೆದರಿಕೆ ಹಾಕಿದ್ದ. ಇದರಿಂದ ಭಯಗೊಂಡ ಬಾಲಕಿ ಘಟನೆಯನ್ನು ಯಾರ ಬಳಿಯೂ ಹಂಚಿಕೊಂಡಿರಲಿಲ್ಲ.

​ಇತ್ತೀಚೆಗೆ ಬಾಲಕಿ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದ್ದು, ಆಗಸ್ಟ್‌ 22ರಂದು ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಈ ಸಂಬಂಧ ಆಗಸ್ಟ್‌ 23ರಂದು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

​ಮಿಂಚಿನ ಕಾರ್ಯಾಚರಣೆ – ಆಂಧ್ರಕ್ಕೆ ಓಡಲು ಯತ್ನಿಸಿದ್ದ ಆರೋಪಿ:

ಪ್ರಕರಣ ದಾಖಲಾಗುತ್ತಿದ್ದಂತೆ ಬಂಧನದ ಭೀತಿಯಿಂದ ಆರೋಪಿ ಶ್ರೀಕಾಂತ್‌ ಪರಾರಿಯಾಗಲು ಯತ್ನಿಸಿದ್ದ. ಬೆಂಗಳೂರಿನ ದೊಡ್ಡಬಳ್ಳಾಪುರ ಮಾರ್ಗವಾಗಿ ತನ್ನ ಸ್ವಗ್ರಾಮವಾದ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಹಿಂದೂಪುರಕ್ಕೆ ಪರಾರಿಯಾಗಲು ಸಂಚು ರೂಪಿಸಿದ್ದ. ಈ ಕುರಿತು ಖಚಿತ ಮಾಹಿತಿ ಪಡೆದ ಧರ್ಮಸ್ಥಳ ಪೊಲೀಸರು ಆಗಸ್ಟ್‌ 25ರ ಸಂಜೆ ದೊಡ್ಡಬಳ್ಳಾಪುರದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಆತನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

​ನ್ಯಾಯಾಂಗ ಬಂಧನ:

ಬಂಧಿತ ಆರೋಪಿಯನ್ನು ಆಗಸ್ಟ್‌ 26ರಂದು ಮಂಗಳೂರಿನ ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಧರ್ಮಸ್ಥಳ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.



image