ಮಂಗಳೂರು: ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಇಂದು ಧಾರ್ಮಿಕ ಸಂಭ್ರಮ ಮೈಗೂಡಿದೆ. ಕ್ಷೇತ್ರದ ಸ್ಥಾಪಕ, ಸಾಮಾಜಿಕ ಕ್ರಾಂತಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮದಿನಾಚರಣೆ ಹಾಗೂ ವರಮಹಾಲಕ್ಷ್ಮೀ ಪೂಜಾ ಮಹೋತ್ಸವವು ಅತ್ಯಂತ ಶ್ರದ್ಧಾ-ಭಕ್ತಿಗಳಿಂದ ಜರುಗುತ್ತಿದೆ.
ಗುರುವಾರದ ಸೂರ್ಯೋದಯದೊಂದಿಗೆ ಬೆಳಗ್ಗೆ 8:45ಕ್ಕೆ ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಧಾರ್ಮಿಕ ಕಾಯಕ್ರಮಗಳಿಗೆ ಚಾಲನೆ ನೀಡಲಾಯಿತು. ಬಳಿಕ ಬೆಳಗ್ಗೆ 9 ಗಂಟೆಗೆ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರಿಗೆ ವಿಶೇಷ ಅಭಿಷೇಕ ನೆರವೇರಿಸಿ, ಶ್ರೀ ಗೋಕರ್ಣನಾಥ ಕಲ್ಯಾಣ ಮಂಟಪದ ವಿಶಾಲ ವೇದಿಕೆಯಲ್ಲಿ ಮಂತ್ರಘೋಷಗಳೊಂದಿಗೆ ವೈಭವದ ಕಲಶ ಪ್ರತಿಷ್ಠಾಪನೆ ನೆರವೇರಿಸಲಾಯಿತು.
ಈ ಪವಿತ್ರ ಕಾರ್ಯಕ್ರಮದಲ್ಲಿ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷರಾದ ಜೈರಾಜ್ ಎಚ್. ಸೋಮಸುಂದರಂ, ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಮಾಜಿ ಅಧ್ಯಕ್ಷರಾದ ಎಚ್. ಎಸ್. ಸಾಯಿರಾಂ, ಮಂಡಳಿಯ ಎಲ್ಲಾ ವಿಶ್ವಸ್ತರು, ಕ್ಷೇತ್ರ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಹಾಗೂ ದೇಶ-ವಿದೇಶಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಗುರುವರ್ಯರ ಕೃಪೆಗೆ ಪಾತ್ರರಾದರು.
ಮಹಿಳಾ ಭಕ್ತರ ಕಡಲು:
ಒಂದೆಡೆ ನಾರಾಯಣ ಗುರುಗಳ ಜಯಂತ್ಯುತ್ಸವದ ಸಡಗರವಿದ್ದರೆ, ಇನ್ನೊಂದೆಡೆ ಶ್ರಾವಣ ಮಾಸದ ಪವಿತ್ರ ವರಮಹಾಲಕ್ಷ್ಮೀ ವ್ರತದ ಅಂಗವಾಗಿ ಬೆಳಗಿನ ಜಾವದಿಂದಲೇ ಸಾವಿರಾರು ಮಹಿಳಾ ಭಕ್ತರು ದೇವಸ್ಥಾನಕ್ಕೆ ಹರಿದು ಬರುತ್ತಿದ್ದಾರೆ. ಶ್ರೀ ಸೌಭಾಗ್ಯಲಕ್ಷ್ಮಿಯ ಕೃಪೆಗಾಗಿ ಮಹಿಳೆಯರು ವಿಶೇಷ ಪೂಜೆ-ಪುನಸ್ಕಾರಗಳಲ್ಲಿ ತೊಡಗಿಸಿಕೊಂಡಿದ್ದು, ಇಡೀ ಕ್ಷೇತ್ರಾವರಣದಲ್ಲಿ ಧಾರ್ಮಿಕ ವಾತಾವರಣ ಕಳೆಗೆಟ್ಟಿದೆ. ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ಷೇತ್ರಾಡಳಿತ ಮಂಡಳಿಯು ಸೂಕ್ತ ವ್ಯವಸ್ಥೆ ಕಲ್ಪಿಸಿದೆ.


