ದಕ್ಷಿಣ ಕನ್ನಡ

ಮಂಗಳೂರು: 2019ರ ಪ್ರಕರಣದ ಪರಾರಿಯಾಗಿದ್ದ ಆರೋಪಿ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧನ

 


ಮಂಗಳೂರು: ಕಳೆದ ಆರು ವರ್ಷಗಳಿಂದ ಪೊಲೀಸರಿಗೆ ಸಿಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಹಳೆಯ ಪ್ರಕರಣದ ಪ್ರಮುಖ ಆರೋಪಿಯೊಬ್ಬನನ್ನು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಸಿಬಿ/ಮಂಗಳೂರು ಪೊಲೀಸರ ಸಹಕಾರದೊಂದಿಗೆ ವಶಕ್ಕೆ ಪಡೆಯಲಾಗಿದೆ.

​ಬಂಧಿತ ಆರೋಪಿಯನ್ನು ಮುಂಬೈನ ಅಂಧೇರಿ ಪಶ್ಚಿಮ ನಿವಾಸಿ ಅಶೋಕ್ ನಾರಾಯಣ್ (63) ಎಂದು ಗುರುತಿಸಲಾಗಿದೆ.

​ಘಟನೆಯ ವಿವರ:

2019ರಲ್ಲಿ ಮಂಗಳೂರಿನ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಅಶೋಕ್ ನಾರಾಯಣ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಕೇಸ್ ದಾಖಲಾದ ತಕ್ಷಣದಿಂದಲೇ ಈತ ತನ್ನ ವಾಸಸ್ಥಳದ ವಿಳಾಸವನ್ನು ಬದಲಾಯಿಸಿ, ನ್ಯಾಯಾಲಯದ ಸಮನ್ಸ್ ಹಾಗೂ ವಿಚಾರಣೆಗೆ ಹಾಜರಾಗದೆ ಬಂಧನದಿಂದ ತಪ್ಪಿಸಿಕೊಂಡಿದ್ದ. ಪೊಲೀಸರು ಆತನ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದರು.

​ಪ್ರಕರಣದ ಸುದೀರ್ಘ ತನಿಖೆಯ ವೇಳೆ ಆರೋಪಿ ವಿದೇಶಕ್ಕೆ ಪರಾರಿಯಾಗಿರುವ ಸುಳಿವು ಲಭಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಅಧಿಕಾರಿಗಳು, ಆತನ ಪಾಸ್‌ಪೋರ್ಟ್ ಮಾಹಿತಿ ಕಲೆಹಾಕಿ ಆತನ ವಿರುದ್ಧ ಲುಕ್‌ಔಟ್ ಸರ್ಕ್ಯುಲರ್ (LOC) ಹೊರಡಿಸಿದ್ದರು.

​ವಿಮಾನ ನಿಲ್ದಾಣದಲ್ಲಿ ಲಾಕ್:

ಆಗಸ್ಟ್ 1ರಂದು ಆರೋಪಿ ವಿದೇಶದಿಂದ ಭಾರತಕ್ಕೆ ವಾಪಸಾಗುತ್ತಿದ್ದಂತೆ, ಮುಂಬೈ ವಿಮಾನ ನಿಲ್ದಾಣದ ಇಮಿಗ್ರೇಷನ್ ಅಧಿಕಾರಿಗಳು ಆತನನ್ನು ತಡೆದು ಬಂಧಿಸಿದ್ದಾರೆ. ಬಳಿಕ ಮಾಹಿತಿ ಪಡೆದ ಕಂಕನಾಡಿ ನಗರ ಠಾಣೆಯ ಎಎಸ್‌ಐ ಜಗದೀಶ್ ಹಾಗೂ ಸಿಬ್ಬಂದಿ ರವಿಕುಮಾರ್ ಅವರನ್ನೊಳಗೊಂಡ ಪೊಲೀಸ್ ತಂಡ ಮುಂಬೈಗೆ ತೆರಳಿ ಆಗಸ್ಟ್ 2ರಂದು ಆರೋಪಿಯನ್ನು ವಶಕ್ಕೆ ಪಡೆದು, ಮಂಗಳೂರಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದೆ.



image