ದಕ್ಷಿಣ ಕನ್ನಡ

ಸುಳ್ಯ/ಕೊಲ್ಲಮೊಗ್ರು : ಕೊಲ್ಲಮೊಗ್ರುವಿನಲ್ಲಿ ವೈಭವದ 'ಆಟಿ ಕೂಟ 2026' ಸಂಭ್ರಮ: ಸಾಂಪ್ರದಾಯಿಕ ಖಾದ್ಯ, ಗ್ರಾಮೀಣ ಕ್ರೀಡೆಗಳ ಮೇಳ

 


ಸುಳ್ಯ/ಕೊಲ್ಲಮೊಗ್ರು:ಇಲ್ಲಿನ ಕೆ.ವಿ.ಜಿ ಅನುದಾನಿತ ಪ್ರೌಢಶಾಲಾ ಆವರಣದಲ್ಲಿ ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ, ಚೈತನ್ಯ ಯುವತಿ ಮಂಡಲ, ಮಹಾತ್ಮ ಯುವಕ ಮಂಡಲ ಹಾಗೂ ಕೆವಿಜಿ ಶಾಲೆ ಕೊಲ್ಲಮೊಗ್ರು ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಆಟಿ ಕೂಟ - 2026’ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

​ಶಾಲಾ ಆವರಣದಲ್ಲಿ ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ಗದ್ದೆಯಲ್ಲಿ ಯುವತಿ ಮಂಡಲದ ಸದಸ್ಯರು ನೇಜಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ವಿಶಿಷ್ಟ ಚಾಲನೆ ನೀಡಿದರು. ಬಳಿಕ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC) ಅಧ್ಯಕ್ಷ ಬೆಳ್ಯಪ್ಪ ಗೌಡ ಪೈಕ ಅವರು ಕಳಸಿಗೆಗೆ ಭತ್ತ ಸುರಿಯುವ ಮೂಲಕ ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ಪವನ್ ಪಲ್ಲತಡ್ಕ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದರು.


ಆಟಿ ಖಾದ್ಯ ಪ್ರದರ್ಶನ ಹಾಗೂ ವಿವಿಧ ಸ್ಪರ್ಧೆಗಳು:

ತುಳುನಾಡಿನ ಆಟಿ ತಿಂಗಳ ವೈಶಿಷ್ಟ್ಯ ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ ಅನೇಕ ಕಾರ್ಯಕ್ರಮಗಳು ಸಂಘಟಿತಗೊಂಡಿದ್ದವು. ಮಕ್ಕಳು ಹಾಗೂ ಯುವತಿ ಮಂಡಲದ ಸದಸ್ಯರು ಆಟಿ ತಿಂಗಳಲ್ಲಿ ತಯಾರಿಸುವ 30ಕ್ಕೂ ಹೆಚ್ಚು ಸಾಂಪ್ರದಾಯಿಕ ಖಾದ್ಯಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದು, ಸಾರ್ವಜನಿಕರ ಗಮನ ಸೆಳೆಯಿತು. ಅತ್ಯುತ್ತಮ ಖಾದ್ಯಗಳಿಗೆ ಬಹುಮಾನ ವಿತರಿಸಲಾಯಿತು.

​ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಆಟಿ ಆಚರಣೆ ಕುರಿತು ಭಾಷಣ ಸ್ಪರ್ಧೆ ಹಾಗೂ ರೋಮಾಂಚನಕಾರಿ ಸೌಹಾರ್ದಯುತ ಹಗ್ಗಜಗ್ಗಾಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಇದರೊಂದಿಗೆ ಹಳೆಯ ಕಾಲದಲ್ಲಿ ದಿನನಿತ್ಯದ ಕೆಲಸಗಳಿಗೆ ಬಳಸುತ್ತಿದ್ದ ಅಪರೂಪದ ಪುರಾತನ ವಸ್ತುಗಳ ಪ್ರದರ್ಶನವೂ ಜರುಗಿತು.

ಸನ್ಮಾನ ಮತ್ತು ಉಪಸ್ಥಿತಿ:

ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದ ಯುವಜನ ಸಂಯುಕ್ತ ಮಂಡಳಿ, ಯುವಕ ಹಾಗೂ ಯುವತಿ ಮಂಡಲಗಳ ಅಧ್ಯಕ್ಷರುಗಳನ್ನು ಶಾಲು ಹೊದಿಸಿ, ಸನ್ಮಾನಿಸಿ ಗೌರವಿಸಲಾಯಿತು.

​ಈ ಶುಭ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಮಲಾಕ್ಷ ಗೌಡ ಮುಳುಬಾಗಿಲು, ಯುವಜನ ಸಂಯುಕ್ತ ಮಂಡಳಿಯ ಉಸ್ತುವಾರಿ ನಿರ್ದೇಶಕ ದಿನೇಶ್ ಹಾಲೆಮಜಲು, ಶಾಲಾ ಮುಖ್ಯೋಪಾಧ್ಯಾಯ ಸುರೇಶ ಮೂಕಮಲೆ, ಚೈತನ್ಯ ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ಗಾಯತ್ರಿ, ಸ್ಥಾಪಕ ಅಧ್ಯಕ್ಷೆ ಶ್ರೀಮತಿ ಯಶೋಧ ಅಂಬೆಕಲ್ಲು, ಮಂಡಳಿಯ ಪ್ರಧಾನ ಕಾರ್ಯದರ್ಶಿ ಮುರಳಿ ನಳಿಯಾರು, ಹಾಗೂ ಪೂರ್ವ ಅಧ್ಯಕ್ಷ ಪ್ರವೀಣ್ ಕುಮಾರ್ ಜಯನಗರ ಉಪಸ್ಥಿತರಿದ್ದರು.


ಶಾಲೆಯ ನಿವೃತ್ತ ಶಿಕ್ಷಕ ವೆಂಕಟರಮಣ ಗೌಡ ಕೊಪ್ಪಡ್ಕ ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ಹಾಲೆಮಜಲು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ಹರೀಶ್ ಬಳ್ಳಡ್ಕ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದ, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಪೋಷಕರು ಹಾಗೂ ನೂರಾರು ಸಾರ್ವಜನಿಕರು ಭಾಗವಹಿಸಿ ಸಂಭ್ರಮಿಸಿದರು.



image