ಕಲ್ಲಡ್ಕ: ಸಂಸ್ಕಾರಯುತ ಜೀವನ ಶೈಲಿಯನ್ನು ಮೈಗೂಡಿಸಿಕೊಳ್ಳುವಂತೆ ಮಾಡುವುದು ಹಾಗೂ ಗ್ರಾಮಸ್ಥರ ಕಷ್ಟ-ಸುಖಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಸಂಸ್ಥೆಗಳು ಕಾರ್ಯಾಚರಿಸಬೇಕು. ಈ ನಿಟ್ಟಿನಲ್ಲಿ ಸುರಕ್ಷಾ ಸಂಗಮ (ರಿ.) ಪುರ್ಲಿಪಾಡಿ ಸಂಸ್ಥೆಯು ಹಮ್ಮಿಕೊಳ್ಳುವ ವಿವಿಧ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜಕ್ಕೆ ಅತ್ಯಂತ ಮಾದರಿಯಾಗಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ ಯುವ ಮೋರ್ಚಾ ಅಧ್ಯಕ್ಷ ಸಂದೇಶ್ ಶೆಟ್ಟಿ ಅರೆಬೆಟ್ಟು ಅಭಿಪ್ರಾಯಪಟ್ಟರು.
ಅವರು ಆಸ್ಟ್ 23ರಂದು ಕಲ್ಲಡ್ಕದ ಮರಾಠಿ ಭವನ ಪುರ್ಲಿಪಾಡಿಯಲ್ಲಿ ಸುರಕ್ಷಾ ಸಂಗಮ (ರಿ.) ಪುರ್ಲಿಪಾಡಿ, ಕಲ್ಲಡ್ಕ ಇದರ ಆಶ್ರಯದಲ್ಲಿ ಜರುಗಿದ ಬಹುನಿರೀಕ್ಷಿತ ‘ಗೌಜಿ ಗಮ್ಮತ್- 2026’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ಜಯಪ್ರಶಾಂತ್ ಸಂಸ್ಥೆಯ ಸಮಾಜಮುಖಿ ಕಾರ್ಯಗಳ ಕುರಿತು ಬೆಳಕು ಚೆಲ್ಲಿದರು.
ಸಾಧಕರಿಗೆ ಗೌರವ ಸನ್ಮಾನ:
ಸಭಾ ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು:
- ದೈವಿಕ ಸೇವೆ: ದೈವ ಚಾಕರಿದಾರರಾದ ಯೋಗೀಶ್ ಸುವರ್ಣ.
- ಗ್ರಾಮ ಗೌರವ: ಸಮಾಜ ಸೇವಕಿ ನಾಗರತ್ನ ಪೂರ್ಲಿಪಾಡಿ.
- ರಕ್ತದಾನಿ: 25 ಬಾರಿ ರಕ್ತದಾನ ಮಾಡಿ ಜೀವದಾತರೆನಿಸಿಕೊಂಡ ರಾಜೇಶ್ ಬಿ.ಆರ್. ನಗರ.
- ಶೈಕ್ಷಣಿಕ ಸಾಧನೆ: ಎಸ್‌ಎಸ್‌ಎಲ್‌ಸಿ (SSLC) ಹಾಗೂ ಪಿಯುಸಿ (PUC) ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಗಳಿಸಿ ಸಾಧನೆಗೈದ ಸ್ಥಳೀಯ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿ:
ಈ ಅಭಿನಂದನಾ ಸಮಾರಂಭದಲ್ಲಿ ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಬಂಟ್ವಾಳ ತಾಲೂಕು ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಹೊಸಕಟ್ಟ ಕನ್‌ಸ್ಟ್ರಕ್ಷನ್‌ನ ಮಾಲಕರಾದ ಚಿತ್ರಂಜನ್ ಹೊಸಕಟ್ಟ, ಪ್ರಗತಿಪರ ಕೃಷಿಕರಾದ ಜಯನಂದ ಏಲ್ತಿಮಾರು ಹಾಗೂ ಜನಾರ್ಧನ ಪೂಜಾರಿ ಗೋಳಿಮಾರ್, ವಿಟ್ಲ ಆರ್.ಕೆ. ಡ್ಯಾನ್ಸ್ ಅಕಾಡೆಮಿಯ ರಾಜೇಶ್ ವಿಟ್ಲ, ಕೆ.ಎಸ್. ಬೇಕರಿ ಮಾಲಕ ನವಾಜ್ ರಂಜಿತ್ ಮಾಣಿಲ ನಮ್ಮ ಕುಡ್ಲ 24×7,ಕನ್ನಡ ಶಾರದಾ ಪೂಜಾ ಸಮಿತಿ ಅಧ್ಯಕ್ಷ ಗಣೇಶ್ ಶೆಟ್ಟಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾರ್ಯಕ್ರಮದ ಆರಂಭದಲ್ಲಿ ಆರಾಧ್ಯ ಪ್ರಾರ್ಥಿಸಿದರು. ಸಂಘದ ಗೌರವ ಸಲಹೆಗಾರ ಯತಿನ್ ಕುಮಾರ್ ಏಳ್ತೀಮಾರ್ ಸ್ವಾಗತ ಕೋರಿದರು. ವೆಂಕಟ್ರಾಯ ಪ್ರಭು ಪ್ರಸ್ತಾವಿಕವಾಗಿ ಮಾತನಾಡಿ ಸಂಘದ ಪಯಣವನ್ನು ವಿವರಿಸಿದರು. ಸುರಕ್ಷಾ ಮಹಿಳಾ ಮಂಡಳಿಯ ಅಧ್ಯಕ್ಷೆ ಉಮಾವತಿ ಧನ್ಯವಾದ ಸಮರ್ಪಿಸಿದರು. ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮವನ್ನು ನಿರೂಪಿಸಿದರು.


