ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 4 ರವರೆಗೆ ಆಯೋಜಿಸಲಾಗಿರುವ 28ನೇ ವರ್ಷದ ಭಜನಾ ಕಮ್ಮಟದ ಸಿದ್ಧತೆಗಳ ಕುರಿತು ಮಹೋತ್ಸವ ಸಭಾಭವನದಲ್ಲಿ ಮಂಗಳವಾರ ಪೂರ್ವಭಾವಿ ಸಭೆ ನಡೆಯಿತು.
ಸಂಸ್ಕಾರಯುತ ಕ್ರಾಂತಿ ಸೃಷ್ಟಿಸಿದ ಭಜನಾ ಪರಿಷತ್: ಎ. ವೀರು ಶೆಟ್ಟಿ
ಸಭೆಯನ್ನುದ್ದೇಶಿಸಿ ಮಾತನಾಡಿದ ಭಜನಾ ಕಮ್ಮಟದ ಕಾರ್ಯದರ್ಶಿ ಎ. ವೀರು ಶೆಟ್ಟಿ, ಭಜನಾ ಪರಿಷತ್ ವೇದಿಕೆಯು ಸಮಾಜದಲ್ಲಿ ಧಾರ್ಮಿಕ ಹಾಗೂ ಸಂಸ್ಕಾರಯುತ ಬದಲಾವಣೆಗೆ ಶ್ರಮಿಸುತ್ತಿದೆ ಎಂದರು. ಬೇಸಿಗೆ ರಜೆಯಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ, ಕಾನೂನು ಹಾಗೂ ಆರೋಗ್ಯ ಶಿಬಿರಗಳು, ಮನೆ-ಮನೆ ಭಜನೆ, ಸತ್ಸಂಗ, ಶ್ರಮದಾನ, ಸ್ವಚ್ಛತಾ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆಗಳಲ್ಲಿ ಭಜನಾ ಪರಿಷತ್ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಪ್ರಸಕ್ತ ವರ್ಷದ ಕಮ್ಮಟದ ಪೂರ್ವತಯಾರಿಗಳು ರಾಜ್ಯಾದ್ಯಂತ ಯಶಸ್ವಿಯಾಗಿ ಸಾಗುತ್ತಿದ್ದು, ಎಲ್ಲರ ಸಹಕಾರ ಅಗತ್ಯ ಎಂದು ಕೋರಿದರು.
ಶಿಬಿರಾರ್ಥಿಗಳ ನೋಂದಾವಣೆ ಆರಂಭ: ಜಿ. ಸುಬ್ರಹ್ಮಣ್ಯ ಪ್ರಸಾದ್
ಕಮ್ಮಟದ ಸಂಚಾಲಕ ಜಿ. ಸುಬ್ರಹ್ಮಣ್ಯ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, "ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದೊಂದಿಗೆ ತಾಲೂಕು ಮಟ್ಟದಲ್ಲಿ ಸಭೆಗಳು ನಡೆಯುತ್ತಿದ್ದು, ಶಿಬಿರಾರ್ಥಿಗಳ ನೋಂದಾವಣೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಸೆಪ್ಟೆಂಬರ್ 27 ರಂದು ಮಧ್ಯಾಹ್ನ 2:30 ರಿಂದ ನೋಂದಾವಣೆ ಪ್ರಕ್ರಿಯೆ ಚುರುಕುಗೊಳ್ಳಲಿದ್ದು, ಇದಕ್ಕಾಗಿ ಪೂರಕ ಸಮಿತಿಗಳನ್ನು ರಚಿಸಲಾಗಿದೆ" ಎಂದು ಮಾಹಿತಿ ನೀಡಿದರು. ವಸತಿ, ನಗರ ಭಜನೆ, ಸಾಧಕ ಭಜನಾ ಮಂಡಳಿ ಆಯ್ಕೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಅಕ್ಟೋಬರ್ 4 ರಂದು ನಡೆಯಲಿರುವ ಸಮಾರೋಪ ಸಮಾರಂಭದ ಸಿದ್ಧತೆಗಳ ಕುರಿತು ಅವರು ವಿವರಣೆ ನೀಡಿದರು.
ಹಲವು ಗಣ್ಯರ ಉಪಸ್ಥಿತಿ
ಭಜನಾ ಪರಿಷತ್ ರಾಜ್ಯಾಧ್ಯಕ್ಷ ಪಿ . ಚಂದ್ರಶೇಖರ ಸಾಲ್ಯಾನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸೀತಾರಾಮ ತೋಳ್ಪಾಡಿತ್ತಾಯ, ಬಿ. ಭುಜಬಲಿ, ಲಕ್ಷ್ಮಿನಾರಾಯಣ ರಾವ್, ಪಾರ್ಶ್ವನಾಥ್ ಜೈನ್, ಮಹಾವೀರ ಅಜ್ರಿ, ಕೇಶವ ಪಿ., ಡಾ. ಶಶಿಕಾಂತ್ ಜೈನ್, ರತ್ನವರ್ಮ ಜೈನ್ ಹಾಗೂ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.
ವಿವಿಧ ಉಪಸಮಿತಿಗಳ ಪ್ರಮುಖರು, ಊರಿನ ಗಣ್ಯರು ಹಾಗೂ ಕನ್ಯಾಕುಮಾರಿ ಯುವತಿ ಮಂಡಲದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪವಿತ್ರ ಸುನಿಲ್ ಸ್ವಾಗತಿಸಿ, ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಲ್ಲಿಸಿದರು.

