ಕ್ರೈಂ

ಬೀದರ್‌: 2 ತಿಂಗಳ ಮಗುವನ್ನು ಬಾವಿಗೆ ಎಸೆದು ಕೊಂದ ಹಂತಕರು: ತಾಯಿ, ಅಜ್ಜ-ಅಜ್ಜಿ ಸೇರಿ ನಾಲ್ವರ ಬಂಧನ

ಸಂತಪುರ (ಬೀದರ್): ಹುಟ್ಟಿದ ಎರಡೇ ತಿಂಗಳಿಗೆ ಹಸುಗೂಸೊಂದನ್ನು ಹೆತ್ತ ತಾಯಿ ಹಾಗೂ ಆಕೆಯ ಹೆತ್ತವರೇ ಸೇರಿ ಬಾವಿಗೆ ಎಸೆದು ಕ್ರೂರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಔರಾದ ತಾಲೂಕಿನ ವಡಗಾಂವ(ದೇ) ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

​ಮಗುವಿನ ತಾಯಿ ವಾಣಿಶ್ರೀ (32), ಸೋದರ ಮಾವ ಸಂತೋಷ್‌ ಮಸ್ಕಲೆ (35), ಅಜ್ಜ ಬಸಪ್ಪ (70) ಹಾಗೂ ಅಜ್ಜಿ ರತ್ನಮ್ಮ (65) ಬಂಧಿತ ಆರೋಪಿಗಳು.

ಘಟನೆಯ ವಿವರ:

ವಾಣಿಶ್ರೀ ಅವರನ್ನು ಮಹಾರಾಷ್ಟ್ರದ ಕವಳಗಡ ಗ್ರಾಮದ ಸಂಜಯ್‌ ಎಂಬುವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಹೆರಿಗೆಯ ಬಳಿಕ ವಾಣಿಶ್ರೀ ವಡಗಾಂವನಲ್ಲಿರುವ ತಮ್ಮ ತವರು ಮನೆಯಲ್ಲಿದ್ದರು. ಆದರೆ, ಇದ್ದಕ್ಕಿದ್ದಂತೆ ಎರಡು ತಿಂಗಳ ಮಗು ನಾಪತ್ತೆಯಾಗಿದೆ ಎಂದು ಕುಟುಂಬಸ್ಥರು ನಾಟಕವಾಡಿದ್ದರು. ಆ ಬಳಿಕ "ಮಗುವನ್ನು ದೇವರೇ ಕರೆದುಕೊಂಡು ಹೋದ" ಎಂದು ಜನರನ್ನು ನಂಬಿಸಲು ಹಸಿಸುಳ್ಳಿನ ಕಥೆ ಕಟ್ಟಿದ್ದರು.

​ಕುಟುಂಬಸ್ಥರ ನಡೆ-ನುಡಿಯಲ್ಲಿ ಅನುಮಾನಗೊಂಡ ಸಂತಪುರ ಠಾಣೆಯ ಪೊಲೀಸರು, ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಹತ್ಯೆಯ ಅಸಲಿ ಕೃತ್ಯ ಹೊರಬಿದ್ದಿದೆ.

ತನಿಖೆ ಮುಂದುವರಿಕೆ:

ತಾಯಿ ಮತ್ತು ಆಕೆಯ ಕುಟುಂಬಸ್ಥರೇ ಸೇರಿ ಹಸುಗೂಸನ್ನು ಕೊಲೆ ಮಾಡಲು ನಿಖರ ಕಾರಣವೇನು ಎಂಬುದು ಇನ್ನು ತಿಳಿದುಬಂದಿಲ್ಲ. ಈ ಕುರಿತು ಸಂತಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.



image