ಫರೀದಾಬಾದ್:ಹರಿಯಾಣದ ಫರೀದಾಬಾದ್ ವ್ಯಾಪ್ತಿಯ ಸಿಕ್ರೌನಾ ಗ್ರಾಮದಲ್ಲಿ ಬೆಚ್ಚಿಬೀಳಿಸುವಂತ ಘಟನೆಯೊಂದು ನಡೆದಿದೆ. ಗ್ರಾಮದ ಖಾಸಗಿ ಶಾಲೆಯೊಂದಕ್ಕೆ ನುಗ್ಗಿದ ಮುಸುಕುಧಾರಿ ಯುವಕನೊಬ್ಬ, ಅಲ್ಲೇ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಶಿಕ್ಷಕಿಯನ್ನು ಅತ್ಯಂತ ಕ್ರೂರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಘಟನೆಯಲ್ಲಿ ಮೃತಪಟ್ಟ ಶಿಕ್ಷಕಿಯನ್ನು ಸಂಧ್ಯಾ ಎಂದು ಗುರುತಿಸಲಾಗಿದೆ. ಇವರು ಸಿಕ್ರೌನಾದ 'ಸರಸ್ವತಿ ಸೀನಿಯರ್ ಸೆಕೆಂಡರಿ ಶಾಲೆ'ಯಲ್ಲಿ ಶಿಕ್ಷಕಿಯಾಗಿದ್ದರು.
ಘಟನೆಯ ವಿವರ:
ಬುಧವಾರ ಬೆಳಿಗ್ಗೆ ಸುಮಾರು 9:40 ರ ವೇಳೆಗೆ ಶಾಲೆಯ ಆವರಣಕ್ಕೆ ಬಂದ ಮುಸುಕುಧಾರಿ ಯುವಕ, ಶಿಕ್ಷಕಿ ಸಂಧ್ಯಾ ಅವರನ್ನು ಮಾತನಾಡಿಸಬೇಕೆಂದು ಕೇಳಿದ್ದಾನೆ. ಅದರಂತೆ ಸಂಧ್ಯಾ ಅವರು ಗೇಟ್ ಬಳಿ ಬರುತ್ತಿದ್ದಂತೆ, ಆತ ಸಡನ್ ಆಗಿ ಅವರ ಕುತ್ತಿಗೆ ಹಿಡಿದು ಹೊರಗೆ ಎಳೆದೊಯ್ದು ಚಾಕುವಿನಿಂದ ದಾಳಿ ಮಾಡಿದ್ದಾನೆ. ಕೇವಲ 30 ಸೆಕೆಂಡುಗಳ ಅವಧಿಯಲ್ಲಿ ಆಕೆಯ ಮುಖ, ಕುತ್ತಿಗೆ ಹಾಗೂ ಎದೆಯ ಭಾಗಕ್ಕೆ ಬರೋಬ್ಬರಿ 34 ಬಾರಿ ಇರಿದಿದ್ದಾನೆ.
ಶಿಕ್ಷಕಿ ರಕ್ತದ ಮಡುವಿನಲ್ಲಿ ನೆಲಕ್ಕೆ ಬಿದ್ದರೂ ಬಿಡದೆ ಕ್ರೌರ್ಯ ಮೆರೆದ ದುಷ್ಕರ್ಮಿ, ಬಳಿಕ ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ವೇಳೆ ತಡೆಯಲು ಬಂದ ಶಾಲೆಯ ಪ್ರಾಂಶುಪಾಲ ಡಾ. ತೇಜ್‌ಪಾಲ್ ಶರ್ಮಾ ಅವರ ಮೇಲೆಯೂ ಆತ ಹಲ್ಲೆ ನಡೆಸಿದ್ದಾನೆ. ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಸಂಧ್ಯಾ ಅವರನ್ನು ತಕ್ಷಣವೇ ಹತ್ತಿರದ ಅಲ್ ಫಲಾಹ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಈ ಎಲ್ಲಾ ಭೀಕರ ದೃಶ್ಯಗಳು ಶಾಲೆಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಆರೋಪಿಯ ಬಂಧನ:
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೋಟ್ ಗ್ರಾಮದ ನಿವಾಸಿ ಅಮಿತ್ (21) ಎಂಬಾತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಕೊಲೆಗೆ ಕಾರಣವೇನು?
ಪೊಲೀಸ್ ಅಧಿಕಾರಿಗಳ ಪ್ರಕಾರ, ಆರೋಪಿ ಅಮಿತ್‌ಗೆ ಕಳೆದ ಎರಡು ವರ್ಷಗಳಿಂದ ಸಂಧ್ಯಾ ಅವರ ಪರಿಚಯವಿತ್ತು. ಆತ ಪದೇ ಪದೇ ಆಕೆಗೆ ಕಿರುಕುಳ ನೀಡುತ್ತಾ ಹಿಂಬಾಲಿಸುತ್ತಿದ್ದ. ಸಂಧ್ಯಾಗೆ ಆತನ ಸಹವಾಸ ಇಷ್ಟವಿರಲಿಲ್ಲ. ಇತ್ತೀಚೆಗೆ ಈ ಕಿರುಕುಳ ಸಹಿಸಾರದೆ ಸಂಧ್ಯಾ ಅವರು ಆರೋಪಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಆಗ ಸಾರ್ವಜನಿಕವಾಗಿ ಕ್ಷಮೆ ಕೇಳಿ ಪಾರಾಗಿದ್ದ ಅಮಿತ್, ಮನಸ್ಸಿನಲ್ಲಿ ಹಗೆತನ ಬೆಳೆಸಿಕೊಂಡು ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ಸದ್ಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
