ಮಂಗಳೂರು:ಕಳೆದ ಏಳು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಕಡುಖದೀಮ, ಪ್ರಮುಖ ವಾರಂಟ್ ಆರೋಪಿಯೊಬ್ಬನನ್ನು ಮಂಗಳೂರು ದಕ್ಷಿಣ ಉಪವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಮಾರ್ಗತಲೆ ನಿವಾಸಿ, ಪ್ರಸ್ತುತ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ (ಪಾವೂರು ಪೋಸ್ಟ್ ವ್ಯಾಪ್ತಿಯ ಕುಂಡಪ್ಪು ಗೇರುಕಟ್ಟೆ) ವಾಸಿ ಉಮ್ಮರ್ ನವಾಫ್ (33) ಬಂಧಿತ ಆರೋಪಿ.
13ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು!
ಬಂಧಿತ ಉಮ್ಮರ್ ನವಾಫ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 13ಕ್ಕೂ ಹೆಚ್ಚು ಗಂಭೀರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ನ್ಯಾಯಾಲಯದ ವಿಚಾರಣೆಗೆ ನಿರಂತರವಾಗಿ ಗೈರುಹಾಜರಾಗುತ್ತಿದ್ದ ಹಿನ್ನೆಲೆಯಲ್ಲಿ ಈತನ ವಿರುದ್ಧ ನ್ಯಾಯಾಲಯವು 30ಕ್ಕೂ ಹೆಚ್ಚು ವಾರಂಟ್‌ಗಳನ್ನು ಜಾರಿಗೊಳಿಸಿತ್ತು. ಆದರೂ ಪೊಲೀಸರ ಕಣ್ಣು ತಪ್ಪಿಸಿ ಈತ ಸತತ 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ.
ಪೋಲಿಸ್ ಕಾರ್ಯಾಚರಣೆ:
ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ (ACP) ನೇರ ಮಾರ್ಗದರ್ಶನದಲ್ಲಿ, ಉಪವಿಭಾಗದ ವಿಶೇಷ ಕರ್ತವ್ಯ ಪಡೆ (Special Duty Team) ಸಿಬ್ಬಂದಿಗಳು ಚುರುಕಿನ ಕಾರ್ಯಾಚರಣೆ ನಡೆಸಿ, ಆಗಸ್ಟ್ 2ರಂದು ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಇಲಾಖೆಯ ಅಧಿಕೃತ ಪ್ರಕಟಣೆ ತಿಳಿಸಿದೆ.
