ದೇಶ

ವೈರಲ್ ರೀಲ್ಸ್ ಕ್ರೇಜ್: ಕಾರಿಗೆ 3,400 ಲಿಪ್‌ಸ್ಟಿಕ್ ಮುದ್ದಿಟ್ಟು ದಂಡ ತೆತ್ತ ಯುವಕ!



ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಮತ್ತು ವೀವ್ಸ್ ಪಡೆಯಲು ಯುವಜನತೆ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಆದರೆ, ಇಲ್ಲೊಬ್ಬ ಯುವಕ ತನಗಾಗಿ ಪ್ರೇಯಸಿ ಮಾಡಿದ ಅಪರೂಪದ ಪ್ರೇಮದ ಪ್ರದರ್ಶನದಿಂದಾಗಿ ಕೊನೆಗೆ ಸಂಚಾರ ಪೊಲೀಸರ ಅತಿಥಿಯಾಗಿ ದಂಡ ತೆತ್ತ ಘಟನೆ ನಡೆದಿದೆ.

​3,400 ಲಿಪ್‌ಸ್ಟಿಕ್ ಕಿಸ್‌ಗಳಿಂದ ಅಲಂಕಾರ

ಮಧ್ಯಪ್ರದೇಶದ ಗ್ವಾಲಿಯರ್ ಮೂಲದ ಆದಿತ್ಯ ಸಿಕರ್ವಾರ್ ಎಂಬ ಯುವಕ ತನ್ನ ಬಿಳಿ ಬಣ್ಣದ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಲು ನಿರ್ಧರಿಸಿದ್ದ. ಇದಕ್ಕಾಗಿ ಆತನ ಪ್ರೇಯಸಿ ಬರೋಬ್ಬರಿ ಮೂರೂವರೆ ಗಂಟೆಗಳ ಕಾಲ ಶ್ರಮಿಸಿ, ಕಾರಿನ ಬಾನೆಟ್, ಬಾಗಿಲು ಹಾಗೂ ಸಂಪೂರ್ಣ ಮೈಮೇಲೆ ಲಿಪ್‌ಸ್ಟಿಕ್‌ನಿಂದ ಸುಮಾರು 3,400 ಕಿಸ್ ಗುರುತುಗಳನ್ನು (ಮುತ್ತು) ಮೂಡಿಸಿದ್ದಳು.

​ರೀಲ್ಸ್ ಚಟಕ್ಕೆ ಪೊಲೀಸರ ಬಿಸಿ

ಲಿಪ್‌ಸ್ಟಿಕ್ ಗುರುತುಗಳಿಂದ ಆಕರ್ಷಕವಾಗಿ ಕಾಣುತ್ತಿದ್ದ ಕಾರನ್ನು ರಸ್ತೆಗೆ ತಂದ ಆದಿತ್ಯ, ಅತಿ ವೇಗವಾಗಿ ಚಾಲನೆ ಮಾಡುತ್ತಾ ರೀಲ್ಸ್ ಹಂಚಿಕೊಂಡಿದ್ದ. ಈ ವಿಡಿಯೋ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿ ಅಪಾರ ವೀಕ್ಷಣೆ ಗಿಟ್ಟಿಸಿಕೊಂಡರೂ, ಕೊನೆಗೆ ಸಂಚಾರ ಪೊಲೀಸರ ಕಣ್ಣಿಗೆ ಬಿದ್ದಿದೆ.

​ದಂಡದ ಜೊತೆಗೆ ಕಾರು ಕ್ಲೀನ್!

ರಸ್ತೆ ಸುರಕ್ಷತೆಯ ನಿಯಮಗಳನ್ನು ಗಾಳಿಗೆ ತೂರಿ ಅಪಾಯಕಾರಿಯಾಗಿ ವಾಹನ ಚಲಾಯಿಸಿದ್ದಕ್ಕಾಗಿ ಮತ್ತು ಸಂಚಾರ ನಿಯಮ ಉಲ್ಲಂಘನೆಗಾಗಿ ಪೊಲೀಸರು ಆದಿತ್ಯನಿಗೆ ₹5,500 ದಂಡ ವಿಧಿಸಿದ್ದಾರೆ. ಅಷ್ಟಕ್ಕೇ ಮುಗಿಯದೇ, ಪೊಲೀಸ್ ಠಾಣೆಯಲ್ಲೇ ಆತನಿಂದ ನೀರು ಮತ್ತು ಬಟ್ಟೆ ಕೊಟ್ಟು ಕಾರಿನ ಮೇಲಿದ್ದ ಎಲ್ಲಾ 3,400 ಲಿಪ್‌ಸ್ಟಿಕ್ ಗುರುತುಗಳನ್ನು ತೊಳೆಯುವಂತೆ ಮಾಡಿದ್ದಾರೆ. ಕೊನೆಗೆ ಯುವಕ ತಪ್ಪು ಒಪ್ಪಿಕೊಂಡು ದಂಡ ಪಾವತಿಸಿದ್ದಾನೆ.



image