ಶ್ರೀರಂಗಪಟ್ಟಣ (ಮಂಡ್ಯ): ವರಮಹಾಲಕ್ಷ್ಮಿ ಹಬ್ಬದ ವಿಶೇಷ ಸಂದರ್ಭದಲ್ಲಿ ಪಟ್ಟಣದ ಐತಿಹಾಸಿಕ ಚಾಮುಂಡೇಶ್ವರಿ ದೇವಾಲಯದಲ್ಲಿ ಧನಲಕ್ಷ್ಮಿ ಅಲಂಕಾರ ವೈಭವ ಕಣ್ಣುಮನ ಸೆಳೆಯುತ್ತಿದೆ. ದೇವಿಯ ಗರ್ಭಗುಡಿಯನ್ನು ಬರೋಬ್ಬರಿ ₹3 ಲಕ್ಷ ಮೌಲ್ಯದ ನಗದು ನೋಟುಗಳು ಹಾಗೂ ನಾಣ್ಯಗಳಿಂದ ಮನಮೋಹಕವಾಗಿ ಶೃಂಗರಿಸಲಾಗಿದ್ದು, ಭಕ್ತಾದಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ.
ದೇವಾಲಯದ ಒಳ ಆವರಣ, ನಾಲ್ಕೂ ಮೂಲೆಗಳು ಮತ್ತು ದೇವಿಯ ಪ್ರಭಾವಳಿಯನ್ನು ವಿವಿಧ ಮುಖಬೆಲೆಯ ನೋಟುಗಳಿಂದ ಕಲಾತ್ಮಕವಾಗಿ ಜೋಡಿಸಲಾಗಿದೆ. ಮೇಲ್ಭಾಗದಲ್ಲಿ ನೋಟುಗಳನ್ನು ಸುರುಳಿಯಾಕಾರದಲ್ಲಿ ನೆರಿಗೆಯಂತೆ ಜೋಡಿಸಿ ತೂಗುಹಾಕಿದ್ದು, ಸೌಂದರ್ಯಯುತ ತೋರಣದಂತೆ ಕಂಗೊಳಿಸುತ್ತಿದೆ.
ಶ್ರೀ ಚಾಮುಂಡೇಶ್ವರಿ ದೇವಿಗೆ ನೂತನ ರೇಷ್ಮೆ ಸೀರೆ, ಉಡಿಸಿ, ಹೊಳೆಯುವ ಆಭರಣಗಳು, ನವನವೀನ ಮಲ್ಲಿಗೆ ಹೂವಿನ ಮಾಲೆ ಹಾಗೂ ವಿವಿಧ ಫಲ-ಪುಷ್ಪಗಳಿಂದ ವಿಶೇಷ ಪೂಜೆ ನೆರವೇರಿಸಲಾಗಿದೆ. ಐಶ್ವರ್ಯದಾಯಿನಿ ಲಕ್ಷ್ಮಿ ರೂಪದಲ್ಲಿ ಕಂಗೊಳಿಸುತ್ತಿರುವ ದೇವಿಯ ದರ್ಶನಕ್ಕೆ ಶ್ರೀರಂಗಪಟ್ಟಣ ಸೇರಿದಂತೆ ಸುತ್ತಮುತ್ತಲಿನ ನೂರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ಧನ್ಯತೆ ಮೆರೆಯುತ್ತಿದ್ದಾರೆ.
