ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಹುಟ್ಟಿದ ತಂಗಿಯನ್ನೇ ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಹತ್ಯೆಗೈದಿದ್ದ ಆರೋಪಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಕಂಬಳಪದವು ನಿವಾಸಿ ಸ್ಯಾಮ್ಸನ್ ಫ್ರಾನ್ಸಿಸ್ ಕುಟಿನ್ಹಾ ಶಿಕ್ಷೆಗೆ ಗುರಿಯಾದ ಅಪರಾಧಿ.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು ಐಪಿಸಿ ಕಲಂ 304 (II)ರ ಅಡಿಯಲ್ಲಿ 4 ವರ್ಷಗಳ ಸಜಾ ಶಿಕ್ಷೆ ಹಾಗೂ ₹10,000 ದಂಡ ವಿಧಿಸಿದೆ. ಇದರೊಂದಿಗೆ ಸಾಕ್ಷ್ಯ ನಾಶಪಡಿಸಿದ ಅಪರಾಧಕ್ಕಾಗಿ (ಐಪಿಸಿ ಕಲಂ 201) 1 ವರ್ಷ ಶಿಕ್ಷೆ ಮತ್ತು ₹1,000 ದಂಡ ಪಾವತಿಸುವಂತೆ ಸೋಮವಾರ ತೀರ್ಪು ನೀಡಿದೆ.
ಮೊಬೈಲ್ ಫೋನ್‌ಗಾಗಿ ನಡೆದ ಗಲಾಟೆ:
2019ರ ಅಕ್ಟೋಬರ್ 8ರಂದು ಕಂಬಳಪದವಿನಲ್ಲಿರುವ ತಮ್ಮ ನಿವಾಸದಲ್ಲಿ ಸ್ಯಾಮ್ಸನ್, ತಂಗಿ ಫಿಯೋನಾ ಸ್ವೀಡಲ್ ಕುಟಿನ್ಹಾ ಬಳಿ ಮೊಬೈಲ್ ಫೋನ್ ಕೇಳಿದ್ದನು. ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದು, ಆಕ್ರೋಶಗೊಂಡ ಸ್ಯಾಮ್ಸನ್ ಸುತ್ತಿಗೆಯಿಂದ ಆಕೆಯ ತಲೆಗೆ ಬಲವಾಗಿ ಹಲ್ಲೆ ನಡೆಸಿದ್ದನು. ಗಂಭೀರ ಗಾಯಗೊಂಡ ಫಿಯೋನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. ಬಳಿಕ ಕೃತ್ಯವನ್ನು ಮುಚ್ಚಿಹಾಕುವ ಉದ್ದೇಶದಿಂದ ಮೃತದೇಹವನ್ನು ಮನೆಯ ಹಿಂಭಾಗದ ಪೊದೆಯಲ್ಲಿ ಬಚ್ಚಿಟ್ಟಿದ್ದನು.
ತನಿಖೆ ನಡೆಸಿದ್ದ ಎಸಿಪಿ ಕೋದಂಡ ರಾಮ್:
ಪುತ್ರಿ ಕಾಣೆಯಾಗಿರುವ ಬಗ್ಗೆ ತಂದೆ ಫ್ರಾನ್ಸಿಸ್ ಕುಟಿನ್ಹಾ ಕೊಣಾಜೆ ಠಾಣೆಗೆ ದೂರು ನೀಡಿದ್ದರು. ಆರಂಭದಲ್ಲಿ ಅಪಹರಣ ಪ್ರಕರಣ (ಐಪಿಸಿ ಕಲಂ 363) ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಆಗಿನ ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಟಿ. ಕೋದಂಡ ರಾಮ್ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ, ಕೊಲೆಯ ರಹಸ್ಯವನ್ನು ಭೇದಿಸಿ ಆರೋಪಿಯನ್ನು ಬಂಧಿಸಿತ್ತು.
ತನಿಖೆ ಪೂರ್ಣಗೊಳಿಸಿದ ಅಧಿಕಾರಿಗಳು 2020ರ ಜನವರಿ 10ರಂದು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದರು. ಆ. 24ರಂದು ನ್ಯಾಯಾಧೀಶರು ತೀರ್ಪು ನೀಡಿದ್ದು, ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ್ ಪ್ರಾಸಿಕ್ಯೂಷನ್ ಪರವಾಗಿ ವಾದ ಮಂಡಿಸಿದ್ದರು.

