ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ಸಮೀಪವಿರುವ ತೆಕ್ಕಟ್ಟೆಯ ಶ್ರೀ ಬ್ರಹ್ಮಸ್ಥಾನದ ಬಳಿಯಿರುವ ದಿನಸಿ ಅಂಗಡಿಯೊಂದರಲ್ಲಿ ಮಂಗಳವಾರ ಮುಂಜಾನೆ ದಿಢೀರ್ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳು ಬೆಂಕಿಗಾಹುತಿಯಾಗಿವೆ. ತೆಕ್ಕಟ್ಟೆಯ ‘ಗುರು ಬ್ರಹ್ಮ ಜನರಲ್ ಸ್ಟೋರ್’ ಸಂಸ್ಥೆಯಲ್ಲಿ ಈ ಘಟನೆ ನಡೆದಿದೆ.
ಘಟನೆಯ ವಿವರ:
ಅಂಗಡಿಯ ಮಾಲೀಕರಾದ ಸಂತೋಷ್ ಅವರು ಸೋಮವಾರ ರಾತ್ರಿ ಕಾರ್ಯ ಮುಗಿಸಿ ಅಂಗಡಿ ಮುಚ್ಚಿ ಮನೆಗೆ ತೆರಳಿದ್ದರು. ಆದರೆ ಮಂಗಳವಾರ ಮುಂಜಾನೆ ಸುಮಾರು 1:30ರ ವೇಳೆಗೆ ಅಂಗಡಿಯಿಂದ ಏಕಾಏಕಿ ದಟ್ಟ ಹೊಗೆ ಹಾಗೂ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿಯ ಜ್ವಾಲೆ ಇಡೀ ಅಂಗಡಿಯನ್ನು ಆವರಿಸಿಕೊಂಡಿದ್ದು, ಅಂಗಡಿಯಲ್ಲಿದ್ದ ದಿನಸಿ ಸಾಮಗ್ರಿಗಳು, ಫ್ರಿಜ್‌ಗಳು ಹಾಗೂ ಪೀಠೋಪಕರಣಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಶಾರ್ಟ್ ಸರ್ಕ್ಯೂಟ್ ಶಂಕೆ:
ಅಂಗಡಿಯಲ್ಲಿದ್ದ ಮೂರಕ್ಕೂ ಹೆಚ್ಚು ಫ್ರಿಜ್‌ಗಳ ಪೈಕಿ ಒಂದರಲ್ಲಿ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಲೇ ಈ ಅಗ್ನಿ ದುರಂತ ಸಂಭವಿಸಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.
40 ಲಕ್ಷಕ್ಕೂ ಅಧಿಕ ನಷ್ಟ:
ಅಂಗಡಿಯಲ್ಲಿದ್ದ ಬೆಲೆಬಾಳುವ ಸಾಮಗ್ರಿಗಳು ಸಂಪೂರ್ಣ ನಶಿಸಿಹೋಗಿದ್ದು, ಅಂದಾಜು 40 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಅಪಾರ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಪರಿಶೀಲನೆ ಹಾಗೂ ತನಿಖೆ ಮುಂದುವರಿದಿದೆ.
