ಚಿಕ್ಕಮಗಳೂರು (ಆಗಸ್ಟ್ 18):
ಚಿಕ್ಕಮಗಳೂರು ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಪ್ರತಿಭಟನೆ ವೇಳೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಸೋಮವಾರ ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ಆಯೋಜಿಸಿದ್ದರು. ಪ್ರತಿಭಟನೆಯ ನಂತರ ಕಾರ್ಯಕರ್ತರು ದಿಢೀರನೆ ಜಿಲ್ಲಾಧಿಕಾರಿ ಕಚೇರಿಯತ್ತ ನುಗ್ಗಿ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರ ತಡೆಗೋಡೆಯನ್ನು ಮೀರಿ, ಪೊಲೀಸ್ ವಾಹನಗಳ ಮೇಲೆ ಹತ್ತಿ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿಯನ್ನು ನಿಯಂತ್ರಿಸುವ ಸಮಯದಲ್ಲಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ತಳ್ಳಾಟ-ನೂಕಾಟ ನಡೆದು, ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸುಮೋಟೋ ಕೇಸ್ ದಾಖಲು:
ಕರ್ತವ್ಯದಲ್ಲಿದ್ದ ಪೊಲೀಸರ ಕೆಲಸಕ್ಕೆ ಅಡ್ಡಿಪಡಿಸಿದ್ದು ಮತ್ತು ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ಪೊಲೀಸ್ ಇನ್ಸ್‌ಪೆಕ್ಟರ್ ಅಭಯ ಪ್ರಕಾಶ್ ಅವರು ನೀಡಿದ ದೂರಿನನ್ವಯ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ 'ಸುಮೋಟೋ' ಪ್ರಕರಣ (ಸ್ವಯಂಪ್ರೇರಿತ ದೂರು) ದಾಖಲಾಗಿದೆ.
ಪ್ರಮುಖರ ವಿರುದ್ಧ ಕೇಸ್:
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ನಗರಾಧ್ಯಕ್ಷ ಪುಷ್ಪರಾಜ್, ಯುವ ಮೋರ್ಚಾ ಮುಖಂಡ ಸಂತೋಷ್ ಕೊಟ್ಯಾನ್ ಹಾಗೂ ಹಲವು ಮಹಿಳಾ ಕಾರ್ಯಕರ್ತೆಯರು ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
