ರಾಜ್ಯ

ಹುಣಸೂರು: ತಿಂಡಿ ಪ್ಯಾಕೆಟ್‌ನಲ್ಲಿದ್ದ ಆಟಿಕೆ ನುಂಗಿ 5 ವರ್ಷದ ಕಂದಮ್ಮ ದಾರುಣ ಸಾವು!

 


ಹುಣಸೂರು:ಅಂಗಡಿಯಿಂದ ತಂದಿದ್ದ ತಿಂಡಿ ಪ್ಯಾಕೆಟ್‌ನಲ್ಲಿದ್ದ ಪುಟ್ಟ ಪ್ಲಾಸ್ಟಿಕ್ ಆಟಿಕೆಯೊಂದು ಐದು ವರ್ಷದ ಮುದ್ದು ಕಂದನ ಪ್ರಾಣವನ್ನೇ ಬಲಿ ಪಡೆದಿರುವ ಆಘಾತಕಾರಿ ಘಟನೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

​ತಾಲೂಕಿನ ಗೌರಿಪುರದ ಸಂತೋಷ್ ಮತ್ತು ಐಶ್ವರ್ಯ ದಂಪತಿಯ ಏಕೈಕ ಪುತ್ರ ಮುಕುಂದ್ ಮಯೂರ್ (5) ಮೃತಪಟ್ಟ ದುರ್ದೈವಿ ಬಾಲಕ.

ಘಟನೆಯ ಹಿನ್ನೆಲೆ:

​ಶನಿವಾರ ಮಗು ಅಳುತ್ತಿದ್ದಾಗ ಸಂಬಂಧಿಕರ ಮಕ್ಕಳು ಗೌರಿಪುರದ ಸಮೀಪದ ಅಂಗಡಿಯೊಂದಕ್ಕೆ ತೆರಳಿ ತಿಂಡಿ ಪ್ಯಾಕೆಟ್ ಕೊಡಿಸಿದ್ದರು. ಪ್ರಸ್ತುತ ಮಾರುಕಟ್ಟೆಯಲ್ಲಿ ಮಕ್ಕಳನ್ನು ಆಕರ್ಷಿಸಲು ತಿಂಡಿ ತಯಾರಿಕಾ ಕಂಪನಿಗಳು ಪ್ಯಾಕೆಟ್‌ನೊಳಗೆ ನೀಡುವ ಉಚಿತ ಪ್ಲಾಸ್ಟಿಕ್ ಗಿಫ್ಟ್ ಚೆಂಡನ್ನು (Gift Ball) ತಿಂಡಿ ತಿಂದ ನಂತರ ಮಗು ಬಾಯಿಗೆ ಹಾಕಿಕೊಂಡಿದೆ.

​ಈ ವೇಳೆ ಆಕಸ್ಮಿಕವಾಗಿ ಪ್ಲಾಸ್ಟಿಕ್ ಚೆಂಡು ಬಾಲಕನ ಗಂಟಲಿನಲ್ಲಿ ಸಿಲುಕಿಕೊಂಡಿದೆ. ಇದರಿಂದ ಮಗುವಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.

ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರು:

​ವಿಷಯ ತಿಳಿಯುತ್ತಿದ್ದಂತೆ ಆತಂಕಗೊಂಡ ಪೋಷಕರು ಹಾಗೂ ಕುಟುಂಬಸ್ಥರು ತಕ್ಷಣವೇ ಬಾಲಕನನ್ನು ಹುಣಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಮಾರ್ಗಮಧ್ಯದಲ್ಲೇ ಮಗುವಿನ ಗಂಟಲಿನಲ್ಲಿ ಗಾಳಿ ಸಂಚಾರ ಸ್ಥಗಿತಗೊಂಡು ಉಸಿರುಗಟ್ಟಿದ್ದರಿಂದ, ಮಗು ಮೃತಪಟ್ಟಿರುವುದಾಗಿ ಪರೀಕ್ಷಿಸಿದ ವೈದ್ಯರು ದೃಢಪಡಿಸಿದ್ದಾರೆ.

​ಏಕೈಕ ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಗಮನಿಸಿ (ಮಾತಾಪಿತೃಗಳ ಗಮನಕ್ಕೆ): ಸಣ್ಣ ವಯಸ್ಸಿನ ಮಕ್ಕಳಿಗೆ ಉಚಿತ ಆಟಿಕೆಗಳಿರುವ ತಿಂಡಿ ಪ್ಯಾಕೆಟ್‌ಗಳನ್ನು ಕೊಡ್ಸುವಾಗ ಹೆತ್ತವರು ಜಾಗರೂಕರಾಗಿರುವುದು ಅತ್ಯಗತ್ಯ.



image