ಸಿನಿಮಾ

ಮಂಗಳೂರು : ಆಗಸ್ಟ್ 7ಕ್ಕೆ ಬೆಳ್ಳಿಪರದೆಗೆ 'ಪಿಚ್ಚರ್': ಮಂಗಳೂರಿನಲ್ಲಿ ಚಿತ್ರತಂಡದಿಂದ ಅದ್ದೂರಿ ಸುದ್ದಿಗೋಷ್ಠಿ

 


ಮಂಗಳೂರು:ಸಂದೀಪ್ ಬೆದ್ರ ನಿರ್ದೇಶನದ, ಬಹುನಿರೀಕ್ಷಿತ ತುಳು ಮತ್ತು ಕನ್ನಡ ದ್ವಿಭಾಷಾ ಚಲನಚಿತ್ರ 'ಪಿಚ್ಚರ್' ಇದೇ ಆಗಸ್ಟ್ 7 ರಂದು ರಾಜ್ಯಾದ್ಯಂತ ಶೋಕ್ ನೀಡಲು ಸಜ್ಜಾಗಿದೆ. ಈ ಕುರಿತು ಚಿತ್ರತಂಡ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಸಿನಿಮಾದ ವಿಶೇಷತೆಗಳನ್ನು ಹಂಚಿಕೊಂಡಿದೆ.

​ಗೋಲ್ಡನ್ ಮೂವೀಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದ ಕುರಿತು ಮಾತನಾಡಿದ ಗೋಲ್ಡನ್ ಸ್ಟಾರ್ ಗಣೇಶ್, "ಕರಾವಳಿಯ ಸಂಸ್ಕೃತಿ ಮತ್ತು ತುಳು ಭಾಷೆಯ ಮೇಲಿನ ಅಪಾರ ಪ್ರೀತಿಯಿಂದ ಈ ಸಿನಿಮಾವನ್ನು ನಿರ್ಮಿಸಲಾಗಿದೆ. ನವಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದರ ಜೊತೆಗೆ, ಹಿರಿಯ ಅನುಭವಿ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ತಂದಿರುವುದು ಈ 'ಪಿಚ್ಚರ್'ನ ವಿಶೇಷ" ಎಂದರು.

​ಚಿತ್ರದ ನಿರ್ಮಾಪಕಿ ಶಿಲ್ಪಾ ಗಣೇಶ್ ಮಾತನಾಡಿ, "ಸಂಪೂರ್ಣ ಕೌಟುಂಬಿಕ ಹಾಗೂ ಹಾಸ್ಯ ಕಥಾಹಂದರ ಹೊಂದಿರುವ ಈ ಸಿನಿಮಾಗೆ ಪುತ್ತೂರು ಮತ್ತು ಉಡುಪಿಯಲ್ಲಿ ನಡೆದ ಪ್ರೀಮಿಯರ್ ಪ್ರದರ್ಶನಗಳಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ತುಳು ಚಿತ್ರರಂಗದ ದೈತ್ಯ ಕಲಾವಿದರು ಮತ್ತು ತಾಂತ್ರಿಕ ಬಳಗದ ಸಹಕಾರದಿಂದ ಉತ್ತಮ ತಾಂತ್ರಿಕ ಗುಣಮಟ್ಟದಲ್ಲಿ ಸಿನಿಮಾ ಮೂಡಿಬಂದಿದೆ" ಎಂದು ಹರ್ಷ ವ್ಯಕ್ತಪಡಿಸಿದರು.

​ಹಿರಿಯ ರಂಗಕರ್ಮಿ ಹಾಗೂ ನಟ ದೇವದಾಸ್ ಕಾಪಿಕಾಡ್ ಮಾತನಾಡಿ, "'ಪಿಚ್ಚರ್' ಕೋಸ್ಟಲ್‌ವುಡ್‌ಗೆ ಮತ್ತೊಂದು ಯಶಸ್ವಿ ಕೊಡುಗೆಯಾಗಲಿದೆ. ನಾಯಕ ನಟ ನಿತ್ಯಪ್ರಕಾಶ್ ಬಂಟ್ವಾಳ್ ಅವರ ಅಭಿನಯ ಪ್ರೇಕ್ಷಕರ ಮನ ಗೆಲ್ಲುವುದರಲ್ಲಿ ಅನುಮಾನವಿಲ್ಲ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಲವಾದ ತಾರಾಗಣ ಹಾಗೂ ತಾಂತ್ರಿಕ ಬಳಗ:

ಚಿತ್ರದಲ್ಲಿ ನಿತ್ಯಪ್ರಕಾಶ್ ಬಂಟ್ವಾಳ್ ಮತ್ತು ಅಮೃತಾ ಜೋಡಿಯಾಗಿ ಕಾಣಿಸಿಕೊಂಡಿದ್ದು, ಕರಾವಳಿಯ ದಿಗ್ಗಜ ಕಲಾವಿದರಾದ ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್, ಪುಷ್ಪರಾಜ್ ಬೊಳ್ಳಾರ್ ಹಾಗೂ ಅರ್ಜುನ್ ಕಾಪಿಕಾಡ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

​ಸಂತೋಷ್ ರೈ ಮತ್ತು ಚಂದ್ರಶೇಖರ್ ಕೆ.ಎಸ್. ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ಸ್ಯಾಮ್ಯುಯಲ್ ಅಬಿ ಅವರ ಸಂಗೀತ ಸಂಯೋಜನೆ ಇದೆ. ಸುದ್ದಿಗೋಷ್ಠಿಯಲ್ಲಿ ಚಿತ್ರದ ನಾಯಕ-ನಾಯಕಿ, ಪ್ರಮುಖ ಕಲಾವಿದರು ಹಾಗೂ ತಾಂತ್ರಿಕ ವರ್ಗದವರು ಉಪಸ್ಥಿತರಿದ್ದರು.



image