ಬಂಟ್ವಾಳ: ತಾಲೂಕಿನ ಮುಲ್ಕಾಜೆ ಮಾಡ ಎಂಬಲ್ಲಿ ಗುರುವಾರ ಹಾಡಹಗಲೇ ಭೀಕರ ದರೋಡೆ ಪ್ರಕರಣವೊಂದು ವರದಿಯಾಗಿದೆ. ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರ ತೋರಿಸಿ ಲಕ್ಷಾಂತರ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿದೆ.
ಸುರತ್ಕಲ್ ನಿವಾಸಿ ಮಯ್ಯದಿ ಎಂಬವರು ಸ್ಥಳೀಯ ವಿವಿಧ ಅಂಗಡಿಗಳಿಂದ ಸಿಮೆಂಟ್ ಮಾರಾಟದ ಕಲೆಕ್ಷನ್ ಹಣವನ್ನು ವಸೂಲಿ ಮಾಡಿಕೊಂಡು ತಮ್ಮ ಬೈಕ್‌ನಲ್ಲಿ ಹಿಂತಿರುಗುತ್ತಿದ್ದರು. ಈ ವೇಳೆ ಎರಡು ಬೈಕ್‌ಗಳಲ್ಲಿ ಬೆನ್ನಟ್ಟಿ ಬಂದ ನಾಲ್ವರು ಅಪರಿಚಿತರು, ಮುಲ್ಕಾಜೆ ಮಾಡ ಬಳಿ ಸವಾರನನ್ನು ತಡೆದು ನಿಲ್ಲಿಸಿದ್ದಾರೆ. ಬಳಿಕ ತಲವಾರ್‌ನಿಂದ ಬೆದರಿಕೆ ಹಾಕಿ, ಅವರ ಬಳಿಯಿದ್ದ ಹಣದ ಬ್ಯಾಗ್ ಕಸಿದುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ದೋಚಲಾದ ಬ್ಯಾಗ್‌ನಲ್ಲಿ ಸುಮಾರು ₹8 ಲಕ್ಷಕ್ಕೂ ಅಧಿಕ ನಗದು ಇತ್ತು ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ಘಟನೆ ನಡೆದ ತಕ್ಷಣವೇ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ ಹಾಗೂ ಎಸ್‌ಐ ಮಂಜುನಾಥ್ ಅವರನ್ನೊಳಗೊಂಡ ತನಿಖಾ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ದರೋಡೆಯಾದ ನಿಖರ ಮೊತ್ತ ಹಾಗೂ ಘಟನೆಯ ಸಂಪೂರ್ಣ ವಿವರಗಳು ಪೊಲೀಸ್ ತನಿಖೆಯ ನಂತರವಷ್ಟೇ ಹೊರಬರಬೇಕಿದೆ.
