ಕ್ರೈಂ

ಬಂಟ್ವಾಳ: 82 ವರ್ಷದ ವೃದ್ಧೆಯ ಕೈಯಲ್ಲಿದ್ದ ₹5 ಲಕ್ಷ ಮೌಲ್ಯದ ಚಿನ್ನದ ಬಳೆ ಕಳವು ಪ್ರಕರಣ – ಸ್ವಂತ ಮೊಮ್ಮಗನೇ ಆರೋಪಿ, ಪೋಲೀಸರಿಂದ ಬಂಧನ!

 


ಬಂಟ್ವಾಳ: ಮನೆಯಲ್ಲಿ ಒಬ್ಬಂಟಿಯಾಗಿದ್ದ ವಯೋವೃದ್ಧೆಯ ಕೈಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಬಳೆಗಳನ್ನು ಕವರ್ ಮಾಡಿಕೊಂಡು ಕದ್ದಿದ್ದ ಪ್ರಕರಣವನ್ನು ಪುಂಜಾಲಕಟ್ಟೆ ಠಾಣಾ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಅಜ್ಜಿಯ ಸ್ವಂತ ಮೊಮ್ಮಗನನ್ನೇ ಪೊಲೀಸರು ಬಂಧಿಸಿದ್ದಾರೆ.

​ತೆಂಕಕಜೆಕಾರು ನಿವಾಸಿ ಶಬೀರ್ (33) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ ಅಂದಾಜು ₹5 ಲಕ್ಷ ಮೌಲ್ಯದ 40 ಗ್ರಾಂ ತೂಕದ ಎರಡು ಚಿನ್ನದ ಬಳೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

​ಪ್ರಕರಣದ ಹಿನ್ನೆಲೆ:

​ತೆಂಕಕಜೆಕಾರು ಉದ್ದದ ಗುಡ್ಡೆ ನಿವಾಸಿ ಸಾದಿಕ್ ಎಂಬುವವರ 82 ವರ್ಷದ ತಾಯಿ ಅವ್ವಮ್ಮ ಅವರು ಆಗಸ್ಟ್ 14ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಬ್ಬಂಟಿಯಾಗಿದ್ದರು. ಈ ಸಮಯದಲ್ಲಿ ಮುಖಕ್ಕೆ ಬಟ್ಟೆ ಧರಿಸಿ ಬಾಗಿಲು ಪ್ರವೇಶಿಸಿದ ಅಪರಿಚಿತ ವ್ಯಕ್ತಿಯೊಬ್ಬ, ವೃದ್ಧೆಯ ಎರಡೂ ಕೈಗಳಲ್ಲಿದ್ದ ಚಿನ್ನದ ಬಳೆಗಳನ್ನು ಬಲವಂತವಾಗಿ ಎಳೆದುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದ.

​ಈ ಘಟನೆಗೆ ಸಂಬಂಧಿಸಿದಂತೆ ಸಾದಿಕ್ ಅವರು ನೀಡಿದ ದೂರಿನನ್ವಯ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.

​ತನಿಖೆಯಲ್ಲಿ ಮೊಮ್ಮಗನ ಅಸಲಿ ಕೃತ್ಯ ಬಯಲು:

​ಪ್ರಕರಣದ ಬೆನ್ನುಬಿದ್ದ ಪೊಲೀಸರು ತೀವ್ರ ತನಿಖೆ ನಡೆಸಿದಾಗ, ವೃದ್ಧೆಯ ಸ್ವಂತ ಮೊಮ್ಮಗ ಶಬೀರ್ ಈ ಕೃತ್ಯ ಎಸಗಿರುವುದು ಕಂಡುಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆಗಸ್ಟ್ 16ರಂದು ಆರೋಪಿಯನ್ನು ವಶಕ್ಕೆ ಪಡೆದು, ಆತನಿಂದ ಕಳವು ಮಾಡಲಾಗಿದ್ದ ಚಿನ್ನದ ಬಳೆಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ನಡೆಯುತ್ತಿದೆ.

​ತನಿಖಾ ತಂಡಕ್ಕೆ ಅಭಿನಂದನೆ:

​ಬೆಳ್ತಂಗಡಿ ಪೊಲೀಸ್‌ ಉಪಾಧೀಕ್ಷಕಿ ರೋಹಿಣಿ ಸಿ.ಕೆ. ಅವರ ನೇತೃತ್ವದಲ್ಲಿ ನಡೆದ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಗ್ರಾಮಾಂತರ ಸಿಪಿಐ ರವಿ ಬಿ.ಎಸ್., ಪುಂಜಾಲಕಟ್ಟೆ ಠಾಣೆಯ ಪಿಎಸ್‌ಐ ರಾಜೇಶ್‌ ಕೆ.ವಿ., ಹಾಗೂ ಸಿಬ್ಬಂದಿಗಳಾದ ಎಎಸ್‌ಐ ಬೆನ್ನಿಚ್ಚನ್‌, ಪ್ರವೀಣ್‌ ಮೂರುಗೋಳಿ, ರಾಜೇಶ್‌, ವಿಜಯ್‌ ಕುಮಾರ್‌, ರಾಹುಲ್‌ ರಾವ್‌, ನಾಗರಾಜ್‌, ರಜಿತ್‌, ಬಸವರಾಜ್‌, ಸತೀಶ್ ಮತ್ತು ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್‌ ಹಾಗೂ ಸಂಪತ್‌ ಭಾಗವಹಿಸಿದ್ದರು.



image